ಮೈಸೂರು: ಬಹಿಷ್ಕಾರದ ಶಿಕ್ಷೆಗೆ ಬೇಸತ್ತ ವ್ಯಕ್ತಿ ಸಾವಿಗೆ ಶರಣಾದ ಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ನಂಜನಗೂಡು ತಾಲೂಕಿನ ಚೆನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಅಂತ್ಯಸಂಸ್ಕಾರಕ್ಕೂ ಆಗಮಿಸದೆ ಸಮುದಾಯದ ಜನ ಅಮಾನೀಯವಾಗಿ ವರ್ತಿಸಿದ್ದಾರೆ. ಮೃತದೇಹವನ್ನು ಜಮೀನಿನ ಮನೆಯಲ್ಲಿ ಇರಿಸಿ ಕೇವಲ ಸಂಬಂಧಿಕರೇ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ.
ಸ್ವಾಮಿ (48) ಬಹಿಷ್ಕಾರಕ್ಕೆ ಮನನೊಂದು ಸಾವಿಗೆ ಶರಣಾದವ. ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ವಾಮಿ ಹಾಗೂ ಕುಟುಂಬದ ಮೇಲೆ ಸಮುದಾಯದ ಹಾಗೂ ಗ್ರಾಮದ ಮುಖಂಡರು ಬಹಿಷ್ಕಾರ ಹೇರಿದ್ದರು. ಒಂದು ಲಕ್ಷ ದಂಡ ಕಟ್ಟಿದರೆ ಬಹಿಷ್ಕಾರ ತೆರವುಗೊಳಿಸುವುದಾಗಿ ಷರತ್ತು ವಿಧಿಸಿದ್ದರು. ಹೀಗಾಗಿ ಸ್ವಾಮಿ ಕುಟುಂಬದ ಜತೆ ಗ್ರಾಮಸ್ಥರ ಸಂಪರ್ಕ ಕಡಿದು ಹೋಗಿತ್ತು.
ಚೆನ್ನಪಟ್ಟಣ ಗ್ರಾಮದ ಹೊರವಲಯದಲ್ಲಿರುವ ಜಮೀನಿನ ಮನೆಯಲ್ಲಿ ಸ್ವಾಮಿ ಕುಟುಂಬ ವಾಸವಿತ್ತು. ಬಹಿಷ್ಕಾರ ತೆರವುಗೊಳಿಸುವಂತೆ ಸ್ವಾಮಿ ಹಾಗೂ ಕುಟುಂಬ ಇನ್ನಿಲ್ಲದಂತೆ ಮನವಿ ಮಾಡಿದ್ದರೂ ಮುಖಂಡರು ಮಣಿದಿರಲಿಲ್ಲ. ಹೀಗಾಗಿ ಇದರಿಂದ ಮನನೊಂದು ಸ್ವಾಮಿ ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ಸಾವಿಗೆ ಶರಣಾಗಿದ್ದಾನೆ.
ಸ್ವಾಮಿ ಸಾವಿಗೆ ಬಹಿಷ್ಕಾರ ಕಾರಣ ಎಂದು ತಾಯಿ ತಿಮ್ಮಮ್ಮ ಆರೋಪಿಸಿದ್ದಾರೆ. ಇದಕ್ಕೆಲ್ಲಾ ಚೆನ್ನಪಟ್ಟಣ ಗ್ರಾಮದ ತಾಯಮ್ಮ, ಶಿವರಾಜು, ತಿಮ್ಮ ಬೋವಿ, ಕಣ್ಣ ಮತ್ತು ನಿಂಗರಾಜ ಕಾರಣ ಎಂದು ಸ್ವಾಮಿ ತಾಯಿ ತಿಮ್ಮಮ್ಮ ನೇರವಾಗಿ ಆರೋಪಿಸಿದ್ದಾರೆ