ಒಟ್ಟಾವಾ: ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯ ಸಂಚಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಿಳಿದಿತ್ತು ಎಂದು ನಾವು ಹೇಳಿಲ್ಲ ಎಂದು ಹೇಳುವ ಮೂಲಕ ಮಾಧ್ಯಮ ವರದಿಯನ್ನು ಕೆನಡಾ ಸರ್ಕಾರ ಅಧಿಕೃತವಾಗಿ ತಿರಸ್ಕರಿಸಿದೆ.
ಭಾರತದ ಒತ್ತಡ ತೀವ್ರವಾದ ಬೆನ್ನಲ್ಲೇ ಕೆನಡಾ ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಜಿ ಡ್ರೂಯಿನ್ ಹೇಳಿಕೆ ಪ್ರಕಟಿಸಿ ಎರಡು ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ತಿಕ್ಕಾಟವನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ.
ಅಕ್ಟೋಬರ್ 14 ರಂದು ಸಾರ್ವಜನಿಕ ಸುರಕ್ಷತೆ ಮತ್ತು ಬೆದರಿಕೆಯ ಕಾರಣ ಕೆನಡಾ ಪೊಲೀಸ್ (RCMP) ಮತ್ತು ಅಧಿಕಾರಿಗಳು ಕೆನಡಾದಲ್ಲಿ ಭಾರತ ಸರ್ಕಾರದ ಏಜೆಂಟರು ನಡೆಸಿದ ಗಂಭೀರ ಅಪರಾಧ ಚಟುವಟಿಕೆಯ ಬಗ್ಗೆ ಸಾರ್ವಜನಿಕವಾಗಿ ಆರೋಪಗಳನ್ನು ಮಾಡುವ ಕ್ರಮವನ್ನು ತೆಗೆದುಕೊಂಡರು. ಆದರೆ ಕೆನಡಾ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಕೆನಡಾದೊಳಗಿನ ಗಂಭೀರ ಕ್ರಿಮಿನಲ್ ಚಟುವಟಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅಥವಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರದ ಬಗ್ಗೆ ಯಾವುದೇ ಪುರಾವೆ ಇಲ್ಲ. ಮಾಧ್ಯಮ ವರದಿ ಕೇವಲ ಊಹೆ ಮತ್ತು ನಿಖರವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೆನಡಾದ ಗ್ಲೋಬ್ ಆಂಡ್ ಮೇಲ್ ಪತ್ರಿಕೆ ಅನಾಮಧೇಯ ಕೆನಡಾ ಸರ್ಕಾರಿ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನ ಹತ್ಯೆ ಸಂಚನ್ನು ಗೃಹ ಸಚಿವ ಅಮಿತ್ ಶಾ ರೂಪಿಸಿದ್ದರು. ಈ ಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಮಾಹಿತಿ ನೀಡಲಾಗಿತ್ತು ಎಂದು ವರದಿಯಲ್ಲಿ ಉಲ್ಲಖಿಸಲಾಗಿತ್ತು.