ಭಾರತದಲ್ಲಿ ವಾಯು ಮಾಲಿನ್ಯದಿಂದ ವರ್ಷಕ್ಕೆ 33,000 ಸಾವು – ಬೆಂಗ್ಳೂರಿನ ಸ್ಥಿತಿ ಏನು? 

public wpadmin

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಭಾರತದ 10 ಪ್ರಮುಖ ಮಹಾನಗರಗಳಲ್ಲಿ ವರ್ಷಕ್ಕೆ ಸುಮಾರು 33,000 ಮಂದಿ ವಾಯು ಮಾಲಿನ್ಯದ ಕಾರಣಕ್ಕೆ ಸಾವಿಗೀಡಾಗುತ್ತಿದ್ದಾರೆಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಇದಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನ ಕೊಡುಗೆ ಸಹ ಇರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಪ್ರತಿ ಕ್ಯುಬಿಕ್ ಮೀಟರ್‌ನಲ್ಲಿ 15 ಮೈಕ್ರೋಗ್ರಾಮ್ ಗಿಂತಲೂ ಉತ್ತಮವಾಗಿದೆ. ಆದರೆ ಭಾರತದ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದ್ದು ಇಲ್ಲಿನ ಜನರನ್ನು ವಾಯುಮಾಲಿನ್ಯದ ಅಪಾಯದಿಂದ ಪಾರು ಮಾಡಲು ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ವರದಿ ತಿಳಿಸಿದೆ.

ಬೆಂಗಳೂರು, ಅಹಮದಾಬಾದ್, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಪುಣೆ, ಶಿಮ್ಲಾ ಮತ್ತು ವಾರಾಣಸಿ ಮಹಾನಗರಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಇಷ್ಟೂ ನಗರಗಳಲ್ಲಿ ಪ್ರತಿವರ್ಷ 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪ್ರತಿವರ್ಷವೂ ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ವಾಯುಮಾಲಿನ್ಯ ಗುಣಮಟ್ಟದ ಮಾರ್ಗಸೂಚಿಗಿಂತಲೂ ಈ ಮಹಾನಗರಗಳು ಕೆಳಮಟ್ಟದಲ್ಲಿಯೇ ಮುಂದುವರಿದಿವೆ.


ಭಾರತದ 10 ನಗರಗಳು ವಾಯುಮಾಲಿನ್ಯದಿಂದ ಭಾರೀ ಸಮಸ್ಯೆ ಎದುರಿಸುತ್ತಿವೆ. ರಾಷ್ಟ್ರರಾಜಧಾನಿ ದಿಲ್ಲಿಯಲ್ಲೇ ವಾಯುಮಾಲಿನ್ಯಕ್ಕೆ ಅತಿ ಹೆಚ್ಚು ಸಾವುನೋವುಗಳಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ ಇಲ್ಲಿನ ವಾಯುವಿನ ಗುಣಮಟ್ಟ ಅತ್ಯಂತ ಕೆಳಸ್ತರದಲ್ಲಿದ್ದು ವರ್ಷಕ್ಕೆ 11 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ. 2ನೇ ಸ್ಥಾನದಲ್ಲಿರುವುದು ದೇಶದ ವಾಣಿಜ್ಯ ನಗರಿಯಾಗಿರುವ ಮುಂಬೈನಲ್ಲಿ, ಇಲ್ಲಿ ವರ್ಷಕ್ಕೆ ಸುಮಾರು 5,100 ಮಂದಿ ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆಯುತ್ತಿದ್ದಾರೆ. ಕೋಲ್ಕತಾದಲ್ಲಿ 4,700 ಮಂದಿ, ಚೆನ್ನೈನಲ್ಲಿ 2900 ಮಂದಿ ಸಾವಿಗೀಡಾಗುತ್ತಿದ್ದಾರೆ. 5ನೇ ಸ್ಥಾನದಲ್ಲಿ ಉದ್ಯಾನ ನಗರಿ ಬೆಂಗಳೂರು ಇದೆ. ಇಲ್ಲಿ ವರ್ಷಕ್ಕೆ 2100 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಲ್ಲಿ ಕಳೆದ 3 ತಿಂಗಳಿಂದ ನಿರಂತರ ಮಳೆ, ದೊಡ್ಡ ಕಾಮಗಾರಿ ನಡೆಯದೇ ಇರುವುದು, ಮೆಟ್ರೋ ಪ್ರಯಾಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ವಾಯುಮಾಲಿನ್ಯ ಸಾಕಷ್ಟು ಕಡಿಮೆಯಾಗಿದೆ.
ಬೆಂಗ್ಳೂರಲ್ಲಿ 50% ವಾಯುಮಾಲಿನ್ಯಕ್ಕೆ ವಾಹನಗಳೇ ಕಾರಣ. ಕಳೆದ 15 ವರ್ಷಗಳಿಂದೀಚೆಗೆ ವಾಹನಗಳ ಸಂಖ್ಯೆ ಹೆಚ್ಚಳದಿಂದ ಸಂಚಾರ ದಟ್ಟಣೆಯೂ ಅಧಿಕವಾಗಿದೆ. ಹಳೆಯ ವಾಹನಗಳಿಂದ ಹೆಚ್ಚು ತೊಂದರೆ ಉಂಟಾಗುತ್ತಿದೆ. ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವಲ್ಲಿ ಮೆಟ್ರೋ ದೊಡ್ಡ ಪಾತ್ರ ವಹಿಸಿದೆ. ಸದ್ಯ ನಮ್ಮ ಮೆಟ್ರೋ 74 ಕಿ.ಮೀ. ದೂರ ಸಂಚಾರ ನಡೆಸುತ್ತಿದ್ದು, ಪ್ರತಿ ದಿನ ಸರಾಸರಿ 8 ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಮೆಟ್ರೋ ಮಾರ್ಗದಲ್ಲಿ ವಾಹನ ಬಳಕೆ ಕೂಡ ಸಾಕಷ್ಟು ತಗ್ಗಿದ್ದು, ಮಾಲಿನ್ಯ ಪ್ರಮಾಣ ಕಡಿಮೆ ಇದೆ.
ಗಾಳಿಯ ಗುಣಮಟ್ಟ ಎಷ್ಟಿದ್ದರೆ ಉತ್ತಮ?

ಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯುಐ) 0-50 ಇದ್ದರೆ ಉತ್ತಮ. 51-100 ಇದ್ದರೆ ಸಮಾಧಾನಕರ, 100-200 ಮಧ್ಯಮ, 201-300 ಕಳಪೆ, 301-400 ಇದ್ದರೆ ತುಂಬಾ ಕಳಪೆ ಹಾಗೂ ಎಕ್ಯುಐ ಪ್ರಮಾಣ 401-500 ಇದ್ದರೆ ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.

ವಾಯುಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳು

ವಾಯುಮಾಲಿನ್ಯದಿಂದ ಆಸ್ತಮಾ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಶ್ವಾಸಕೋಶದ ಕಾಯಿಲೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು ಮಕ್ಕಳಲ್ಲಿ ಕಲಿಕೆಯ ಬೆಳವಣಿಗೆಯನ್ನು ತಡೆಯುತ್ತದೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹದಂತಹ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.


ಬೆಂಗಳೂರಿನ ಗಾಳಿ ಗುಣಮಟ್ಟ ದೆಹಲಿಯಡೆಗೆ?

ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮುಂದಿನ ಆರು ದಿನಗಳಲ್ಲಿ ಈ ಪ್ರಮಾಣ ಇನ್ನೂ ಏರುವ ನಿರೀಕ್ಷೆ ಇದೆ. ಇದರಿಂದಾಗಿ ಮಕ್ಕಳು ಮತ್ತು ವೃದ್ಧರು ತೀವ್ರ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ದೆಹಲಿಯ ಆನಂದ್ ವಿಹಾರ್ ಸುತ್ತಮುತ್ತಲಿನ ವಾಯು ಗುಣಮಟ್ಟ ಸೂಚ್ಯಂಕವು 405 ರಷ್ಟಿದ್ದು, ಅಪಾಯದ ಮಟ್ಟ ದಾಟಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಇದನ್ನು ಗಂಭೀರ ವರ್ಗದಲ್ಲಿ ಇರಿಸಿದೆ. ಇದೇ ಸಮಯದಲ್ಲಿ, CPCB ಪ್ರಕಾರ, ಅಕ್ಷರಧಾಮ ದೇವಾಲಯದ ಸುತ್ತಮುತ್ತ AQI 361 ನಲ್ಲಿ ದಾಖಲಾಗಿದೆ. ಬವಾನಾದಲ್ಲಿ AQI 392, ರೋಹಿಣಿ 380, ITO 357, ದ್ವಾರಕಾ ಸೆಕ್ಟರ್-8 335 ಹಾಗೂ ಮುಂಡ್ಕಾದಲ್ಲಿ AQI 356 ದಾಖಲಾಗಿದೆ.


ಇದೇ ಪರಿಸ್ಥಿತಿ ಮುಂದಿನ 10 ವರ್ಷಗಳಲ್ಲಿ ಬೆಂಗಳೂರಿಗೂ ಸಹ ಎದುರಾಗಬಹುದು ಎಂಬ ಆತಂಕ ಇದೆ. ಕಳೆದ 15 ವರ್ಷಗಳಿಂದ ಏರಿಕೆಯಾದ ವಾಹನಗಳ ಸಂಖ್ಯೆ ಗಮನಿಸಿದರೆ, ಮುಂದಿನ 5-10 ವರ್ಷಗಳಲ್ಲಿ ಇನ್ನೂ ಹೆಚ್ಚಿನ ವಾಹನಗಳು ಬೆಂಗಳೂರಿನ ರಸ್ತೆಗಳಿಗೆ ಇಳಿಯಲಿವೆ. ಈಗಾಗಲೇ 50% ವಾಯುಮಾಲಿನ್ಯಕ್ಕೆ ವಾಹನಗಳೇ ಕಾರಣ ಎಂಬುದು ಗೊತ್ತಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟ ತಲುಪುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a comment