ಬೆಂಗಳೂರು: ಪ್ರೇಯಸಿಯ ತಾಯಿಯ ಚಿಕಿತ್ಸೆಗಾಗಿ ಚೈನ್ ಕದಿಯುತ್ತಿದ್ದ ಡ್ಯಾನ್ಸ್ ಮಾಸ್ಟರ್‌ನನ್ನು ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹುಲ್ಲೂರು ನಿವಾಸಿ ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ (25) ಎಂದು ಗುರುತಿಸಲಾಗಿದೆ. ನಡಾಫ್‍ನ ಪ್ರೇಯಸಿಯ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಆರೋಪಿ ಚೈನ್ ಕಳ್ಳತನಕ್ಕೆ ಇಳಿದಿದ್ದ ಎಂದು ತಿಳಿದು ಬಂದಿದೆ.
ಕಳೆದ ಆಗಸ್ಟ್‌ನಲ್ಲಿ ಆರೋಪಿ ಜಿಗಣಿಯ ರತ್ನಮ್ಮ ಎಂಬವರ ಸರವನ್ನು ಕಳ್ಳತನ ಮಾಡಿದ್ದ. ಬುಲೆಟ್ ಬೈಕ್‍ನಲ್ಲಿ ಬಂದು ಸಿಗರೇಟ್ ಖರೀದಿಸುವ ನೆಪದಲ್ಲಿ ಮಾಂಗಲ್ಯದ ಸರ ಎಗರಿಸಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.