ಬೆಂಗಳೂರು: ದೇವರ ಭಜನೆಯಲ್ಲಿ ಮಗ್ನರಾಗಿದ್ದ ಸಂದರ್ಭ ಕಿಟಕಿಯಿಂದ ಮಹಿಳೆಯ ಸರ ಕದ್ದು ಆರೋಪಿ ಪರಾರಿಯಾಗಿರುವ ಘಟನೆ ನಂದಿನಿ ಲೇಔಟ್‌ನ ಶಂಕರನಗರ ಗಣೇಶ ದೇಗುಲದಲ್ಲಿ ನಡೆದಿದೆ.
ಅಕ್ಟೋಬರ್ 11ರಂದು ನಡೆದ ಘಟನೆ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಮಂಗಳಾ ಎಂಬ ಮಹಿಳೆ ಅಕ್ಟೋಬರ್ 11ರ ಸಂಜೆ 6:30ರ ಸುಮಾರಿಗೆ ದೇಗುಲಕ್ಕೆ ಬಂದಿದ್ದರು. ಶಂಕರನಗರದ ನಿವಾಸಿಯಾಗಿರುವ ಮಂಗಳಾ ಪತಿ ರೈಲ್ವೆ ಇಲಾಖೆ ನಿವೃತ್ತ ಅಧಿಕಾರಿಯಾಗಿದ್ದರು. ಕಿಟಕಿ ಪಕ್ಕ ಕೂತು ಭಜನೆ ಮಾಡುತ್ತಿದ್ದಾಗ ಸಂಜೆ 7:17ರ ಸುಮಾರಿಗೆ ಕಳ್ಳ ಮಂಗಳಮ್ಮನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ.
ಸರ ಕಿತ್ತುಕೊಳ್ಳಲು ಯತ್ನಿಸಿದ ಸಂದರ್ಭ ಮಹಿಳೆ ಬಿಗಿಯಾಗಿ ಮಾಂಗಲ್ಯ ಹಿಡಿದುಕೊಂಡಿದ್ದಾರೆ. ಮಾಂಗಲ್ಯ ಸರವನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ 70 ಗ್ರಾಂ ತೂಕದ ಸರ ತುಂಡಾಗಿ ಮೂವತ್ತು ಗ್ರಾಂ ಕಳ್ಳನ ಕೈಗೆ ಸಿಕ್ಕಿದೆ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಳ್ಳಲು ಪ್ರಾರಂಭಿಸಿದ್ದು, ಕಳ್ಳ ಅಲ್ಲಿಂದ ಪರಾರಿಯಾಗಿದ್ದಾನೆ.
ಕಳ್ಳನ ಕೈಚಳಕ ಭಜನೆ ವೀಡಿಯೋ ಮಾಡುತ್ತಿದ್ದ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಅಕ್ಟೋಬರ್ 11ರ ರಾತ್ರಿ 9 ಗಂಟೆಗೆ ಮಂಗಳಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.