ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ದರ್ಶನ್ ಇನ್ನೂ ಮಾನಸಿಕವಾಗಿ ಸಿದ್ಧವಾಗದ ಕಾರಣ ಶಸ್ತ್ರಚಿಕಿತ್ಸೆ ನಡೆಸಿಲ್ಲ ಎಂದು ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಅನಾರೋಗ್ಯದ ಕಾರಣ ನೀಡಿದ ದರ್ಶನ್ ಅವರಿಗೆ ಹೈಕೋರ್ಟ್ 6 ವಾರಗಳ ಜಾಮೀನು ನೀಡಿತ್ತು. ಜಾಮೀನು ನೀಡಿದರೂ ದರ್ಶನ್ ಅವರಿಗೆ ಇನ್ನೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಹೀಗಾಗಿ ಶಸ್ತ್ರ ಚಿಕಿತ್ಸೆ ಯಾಕೆ ನಡೆದಿಲ್ಲ ಎಂಬ ಪ್ರಶ್ನೆಗೆ ದರ್ಶನ್ ಪರ ವಕೀಲರು ಆರೋಗ್ಯಕ್ಕೆ ಸಂಬಂಧಿಸಿದ ವರದಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಕ್ಕೆ ತಯಾರಿ ಮಾಡಲಾಗುತ್ತಿದೆ. ದರ್ಶನ್ ಕೂಡ ಶಸ್ತ್ರಚಿಕಿತ್ಸೆಗೆ ತಯಾರಾಗುತ್ತಿದ್ದಾರೆ. ಆದರೆ ಅತಿಯಾದ ರಕ್ತದೊತ್ತಡ ಸಮಸ್ಯೆ ಎದುರಾಗಿದೆ. ಆಪರೇಷನ್ ಮಾಡಬೇಕಾದರೆ ರಕ್ತದೊತ್ತಡ ಸಮತೋಲನ ಆಗಿರಬೇಕು. ದರ್ಶನ್ ರಕ್ತದೊತ್ತಡದ ಸಮಸ್ಯೆ ಸಮತೋಲನಕ್ಕೆ ಬರುತ್ತಿಲ್ಲ. ಇನ್ನೂ ದರ್ಶನ್ ಕೂಡ ಶಸ್ತ್ರ ಚಿಕಿತ್ಸೆಗೆ ಮಾನಸಿಕವಾಗಿ ಸಿದ್ದರಾಗಬೇಕಿದೆ. ಸದ್ಯಕ್ಕೆ ಕನ್ಸರ್ವೇಟಿವ್ ಚಿಕಿತ್ಸೆ ಮುಂದುವರೆದಿದೆ. ಫಿಸಿಯೋಥೆರಪಿ ಮತ್ತು ಔಷಧಗಳಿಂದ ಸಮಸ್ಯೆ ನಿಯಂತ್ರಣದಲ್ಲಿಡುವ ಪ್ರಯತ್ನ ನಡೆಯುತ್ತಿದೆ.
ಬೆನ್ನುಹುರಿ ನೋವಿಗೆ ಪರಿಹಾರ ಪಡೆಯಲು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಂಡಬೇಕೆಂದು ಕೋರಿ ದರ್ಶನ್ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಅಕ್ಟೋಬರ್ 30 ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಪ್ರತಿ ವಾರ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಬೇಕು. ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಕೋರ್ಟ್ ಷರತ್ತು ವಿಧಿಸಿತ್ತು. ದರ್ಶನ್ ಪರ ವಕೀಲರು ಮೂರು ತಿಂಗಳ ಜಾಮೀನು ಕೋರಿದ್ದರು. ಆದರೆ ಕೋರ್ಟ್ 6 ವಾರಗಳ ಜಾಮೀನು ಮಾತ್ರ ಮಂಜೂರು ಮಾಡಿ ದರ್ಶನ್ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು.