ಮುಂಬೈ: ಶಿಕ್ಷಕಿಯೊಬ್ಬಳು 9 ವರ್ಷದ ವಿದ್ಯಾರ್ಥಿನಿಯ ಕೆನ್ನಗೆ ಹೊಡೆದ ಪರಿಣಾಮ ಬಾಲಕಿಯ ಮೆದುಳಿಗೆ ತೀವ್ರ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನಿಂದ ಸುಮಾರು 58 ಕಿಲೋಮೀಟರ್ ದೂರದಲ್ಲಿರುವ ನಲ್ಲಸೋಪಾರ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಟ್ಯೂಷನ್ ಶಿಕ್ಷಕಿ ಅ.5 ರಂದು ವಿದ್ಯಾರ್ಥಿನಿಯ ಕೆನ್ನೆಗೆ ಹೊಡೆದಿದ್ದಳು. ಇದಾದ ಒಂದು ವಾರದ ಬಳಿಕ ವಿದ್ಯಾರ್ಥಿನಿಗೆ ತೀವ್ರ ಆರೋಗ್ಯ ಸಮಸ್ಯೆ ಉಂಟಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಮೆದುಳಿಗೆ ಹಾನಿಯಾಗಿರುವುದು ತಿಳಿದು ಬಂದಿದೆ.
ಶಿಕ್ಷಕಿ ರತ್ನಾ ಸಿಂಗ್ (20), ವಿದ್ಯಾರ್ಥಿನಿ ತರಗತಿಯಲ್ಲಿ ಚೇಷ್ಟೆ ಮಾಡುತ್ತಿದ್ದಳು ಎಂದು ಕಪಾಳಮೋಕ್ಷ ಮಾಡಿದ್ದಳು. ಹೊಡೆತ ಎಷ್ಟು ತೀವ್ರವಾಗಿತ್ತು ಎಂದರೆ ವಿದ್ಯಾರ್ಥಿನಿಯ ಕಿವಿಯೋಲೆ ಕೆನ್ನೆಯೊಳಗೆ ಸಿಲುಕಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ತೀವ್ರತರವಾದ ಮಿದುಳಿನ ಗಾಯ, ದವಡೆಯ ಬಿಗಿತ, ಶ್ವಾಸನಾಳಕ್ಕೆ ತೀವ್ರವಾದ ಗಾಯದಿಂದ ಬಳಲುತ್ತಿದ್ದಾಳೆ. ಆಕೆ ಕಳೆದ 9 ದಿನಗಳಿಂದ ವೆಂಟಿಲೇಟರ್ನಲ್ಲಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.