ಬೆಂಗಳೂರು: ಕುಡಿದ ಮತ್ತಿನಲ್ಲಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರದ ಕೋನಪ್ಪನ ಅಗ್ರಹಾರ ಸರ್ಕಲ್ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯ ಸರ್ವೇಶ್ (28) ಎಂದು ಗುರುತಿಸಲಾಗಿದ್ದು, ಪತ್ನಿ ದೀಪಿಕಾ ಹಾಗೂ ಮಗು ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದ.
ಹೊಸೂರು-ಬೆಂಗಳೂರು ಮುಖ್ಯ ರಸ್ತೆಯ ಕೋನಪ್ಪನ ಅಗ್ರಹಾರದ ಪುರಸಭೆ ಎದುರು ಸರ್ವೇಶ್ ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದ. ನಿನ್ನೆ (ಅ.20 ರಂದು) ರಾತ್ರಿ ಅಂಗಡಿ ವ್ಯಾಪಾರ ಮುಗಿಸಿ, ಹೊರಡುವಾಗ ಮದ್ಯ ಖರೀದಿ ಮಾಡಿದ್ದ. ಈ ವೇಳೆ ಬಾರ್ ಎದುರಿಗಿದ್ದ ಯುವಕರ ಜೊತೆ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ಮಾಡಿ ಹೆದ್ದಾರಿ ದಾಟಿ ಬಂದು ಖಾಲಿಯಿರುವ ಜಾಗದಲ್ಲಿ ಕುಳಿತು ಮದ್ಯ ಸೇವಿಸಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಪಾರ್ಕಿಂಗ್ ಟೈಲ್ಸ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಹೆದ್ದಾರಿಯ ಬಸ್ ನಿಲ್ದಾಣ ಪಕ್ಕದಲ್ಲಿ ಕೊಲೆ ಮಾಡಿ, ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿ.ಸಿ.ಪಿ ಸಾರಾ ಫಾತಿಮ ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.