ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯೋತ್ಸವ ಮೆರವಣಿಗೆ ಭದ್ರತೆಗಾಗಿ 2,200ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವದ ಭದ್ರತೆಗಾಗಿ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ನಿಗಾವಹಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳಲಾಗಿದೆ ಎಂದರು.
ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿನ 800 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಮೂವರು ಎಸಿಪಿ ದರ್ಜೆಯ ಅಧಿಕಾರಿಗಳು 8 ಎಸಿಪಿಗಳು, 25 ಸಿಪಿಐಗಳು, 55 ಪಿಎಸ್ಐಗಳನ್ನು ನಿಯೋಜನೆ ಮಾಡಲಾಗಿದೆ.
ಅಲ್ಲದೇ 130 ಎಎಸೈಗಳು, 1,300 ಪೊಲೀಸ್ ಕಾನ್‌ಸ್ಟೇಬಲ್‌ಗಳು ಭದ್ರತೆಗೆ ನಿಯೋಜನೆ ಮಾಡಿದ್ದು, ಜನರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಶಾಂತಿಯುತ ಕರ್ನಾಟಕ ರಾಜ್ಯೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.