ನಿಮಗೆ ಯಾವುದರಲ್ಲೂ ಆಸಕ್ತಿ ಇಲ್ವಾ? ನಿಮಿಷ್ಟದ ತಿಂಡಿ ತಿನಿಸು, ನಿಮ್ಮಿಷ್ಟದವರ ಬಳಿ ಮಾತಾಡಬೇಕು ಅನ್ನಿಸ್ತಾ ಇಲ್ವಾ? ಬರೀ ಬೇಸರ, ಕೊರಗು, ದುಃಖ ಜೀವನ ಅನ್ನೋ ದುಗುಡ 14 ದಿನಕ್ಕೂ ಅಧಿಕ ಕಾಲ ಬಾಧಿಸುತ್ತಾ? ಹಾಗಾದ್ರೆ ಮನಶಾಸ್ತ್ರಜ್ಞರ ಬಳಿ ಹೋಗುವ ಸಮಯ ಬಂದಿದೆ ಅಂತರ್ಥ. ನೀವು ಕ್ಲಿನಿಕಲ್ ಡಿಪ್ರೆಶನ್ನಲ್ಲಿ ಇದ್ದೀರ ಅಂತಲೇ ಅರ್ಥ.
ಒಂದಲ್ಲ ಎರಡಲ್ಲ. 14 ದಿನಗಳ ಕಾಲ ನಿಮಗೆ ಒಂದು ವಿಚಾರದ ಬಗ್ಗೆ ಅತೀವ ಆಲೋಚನೆ. ನಿದ್ದೆ ಬಾರದೇ ಊಟ ತಿನ್ನದೆ ದುಃಖಿಸುತ್ತಾ ಕಾಲ ಕಳೆಯುವ ಸ್ಥಿತಿ. ಹಾಗಿದ್ರೆ ಬಿ ಅಲರ್ಟ್ ನಿಮ್ಮನ್ನ ಕಾಡ್ತಾ ಇದೆ ಕ್ಲಿನಿಕಲ್ ಡಿಪ್ರೆಶನ್ಡಿಪ್ರೆಶನ್. ಇದು ಇತ್ತೀಚಿಗೆ ಅತೀ ಕಾಮನ್ ಆಗಿ ಎಲ್ಲಾ ವಯಸ್ಸಿನವರು ಬರುತ್ತಿರುವ ಮಾನಸಿಕ ಕಾಯಿಲೆ. ದೇಹಕ್ಕೆ ಜ್ವರ, ನೆಗಡಿ, ಕೆಮ್ಮು ಬರುವಂತೆ ಮನಸ್ಸಿಗೂ ಕೂಡ ಕೆಲವೊಮ್ಮೆ ಕಾಯಿಲೆಗಳು ಬರುತ್ತವೆ. ಇತ್ತೀಚಿಗೆ ಡಿಪ್ರೇಶನ್ ಅಥವಾ ಕ್ಲಿನಿಕಲ್ ಡಿಪ್ರೆಶನ್ ಒಳಗಾಗಿ ಆಸ್ಪತ್ರೆ ಕದ ತಟ್ಟುತ್ತಿರುವರ ಸಂಖ್ಯೆ ಡಬಲ್ ಆಗಿದೆಯೆಂದು ಕಡಬಮ್ಸ್ ಆಸ್ಪತ್ರೆಯ ಮನಶಾಸ್ತ್ರಜ್ಞರಾದ ಡಾಕ್ಟರ್ ನಿಶ್ಚಿತಾ ಜೆ ಅವರು ಹೇಳುತ್ತಾರೆ. ಡಾ. ನಿಶ್ಚಿತಾ ಅವರು ಹೇಳುವ ಪ್ರಕಾರ ನಿರಂತರ ಎರಡು ವಾರಗಳ ಕಾಲ ನಿಮಗೆ ಬೇಜಾರು ಅನಿಸೋದು. ಯಾವುದರಲ್ಲಿಯೂ ಆಸಕ್ತಿ ಇಲ್ಲದೇ ಹೋಗುವುದು. ನಿಶ್ಯಕ್ತಿ ಅನ್ನಿಸೋದು ಆದ್ರೆ ಅದನ್ನು ನಾವು ಖಿನ್ನತೆ ಎನ್ನುತ್ತೇವೆ ಎಂದು ಹೇಳಿದ್ದಾರೆ
ಕ್ಲಿನಿಕಲ್ ಡಿಪ್ರೆಶನ್ಗೆ ನಾನಾ ಕಾರಣಗಳಿವೆ ಎಂದು ಡಾ ನಿಶ್ಚಿತಾ ಹೇಳುತ್ತಾರೆ. ಅದರಲ್ಲಿ ಮೊದಲು ಬರೋದು ಆನುವಂಶಿಕವಾಗಿ ಬರುವ ಸಾಧ್ಯತೆ. ಮನೆಯಲ್ಲಿ ಈ ಹಿಂದೆ ಯಾರಿಗಾದರೂ ಈ ಸಮಸ್ಯೆ ಇದ್ದಲ್ಲಿ ಅದು ಆನುವಂಶಿಕವಾಗಿ ಮುಂದುವರಿಯುವ ಸಾಧ್ಯತೆ ಇರುತ್ತದೆ. ಮತ್ತೊಂದು ಕೆಲಸದ ಹಾಗೂ ಮನೆಯ ಒತ್ತಡಗಳಿಂದಾಗಿ ಬರುವ ಖಿನ್ನತೆ ಎಂದು ಹೇಳಿದ್ದಾರೆ. ಹಾಗೆಯೇ ಜೀವನದಲ್ಲಿ ಏನಾದರೂ ಕಳೆದುಕೊಂಡಾಗಲೂ ಖಿನ್ನತೆಯನ್ನುವುದು ಆವರಿಸುತ್ತದೆ ಎಂದು ಡಾ. ನಿಶ್ಚಿತಾ ಅವರು ಹೇಳಿದ್ದಾರೆ. ಪ್ರಮುಖವಾಗಿ ಮೆದುಳಲ್ಲಿ ಬೇರೆ ಬೇರೆ ರಾಸಾಯನಿಕ ವಸ್ತುಗಳು ಇರುತ್ತವೆ. ಅದರಲ್ಲಿ ಸೆರೆಟೋನಿನ್ ರಾಸಾಯನಿಕ ಅಂಶ ಮೆದುಳಿನಲ್ಲಿ ಕಡಿಮೆ ಆದಾಗ ಈ ಖಿನ್ನತೆಯ ಲಕ್ಷಣಗಳು ಜನರಲ್ಲಿ ಕಾಣಿಸಿಕೊಳ್ಳುತ್ತವೆ.
ಇನ್ನು ಖಿನ್ನತೆಯ ಲಕ್ಷಣಗಳೇನು ಅಂತ ನೋಡುವುದಾದ್ರೆ, ಈಗಾಗಲೇ ನಾವು ಮೂರು ಲಕ್ಷಣಗಳನ್ನು ನೋಡಿದ್ದೇವೆ ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು. ನಿಶ್ಯಕ್ತಿ ಅನಿಸೋದು. ನಿರಂತರ ಬೇಜಾರು ಹೀಗೆ, ಇದರ ಜೊತೆಗೆ ಯಾವುದೇ ಕೆಲಸದಲ್ಲಿಯೂ ಕೂಡ ಏಕಾಗ್ರತೆ ಇಲ್ಲದಿರುವುದು ಕೂಡ ಖಿನ್ನತೆಯ ಒಂದು ಲಕ್ಷಣ. ನೆನಪಿನ ಶಕ್ತಿ ಕಡಿಮೆ ಆಗುವುದು, ತನ್ನ ಮೇಲೆಯೇ ತನಗೆ ಒಂದು ರೀತಿಯ ಕೀಳರಿಮೆ ಹುಟ್ಟಿಕೊಳ್ಳುವುದು. ಹಸಿವು ಆಗದಿರುವುದು. ದೇಹದ ತೂಕದಲ್ಲಿ ವಿಪರೀತ ಬದಲಾವಣೆಯಾಗುತ್ತದೆ. ಒಂದೊಂದು ಬಾರಿ ವಿಪರೀತ ಅನಿಸುವಷ್ಟು ಕಡಿಮೆಯೂ ಆಗಬಹುದು. ಹೆಚ್ಚು ಕೂಡ ಆಗಬಹುದು. ಅದರ ಜೊತೆಗೆ ನಿದ್ರಾಹೀನತೆಯೂ ಕೂಡ ಖಿನ್ನತೆ ಆವರಿಸಿದ ಮನುಷ್ಯರಿಗೆ ಕಾಡುತ್ತದೆ. ಇವು ಪ್ರಮುಖವಾದ ಖಿನ್ನತೆಯ ಲಕ್ಷಣಗಳು ಎನ್ನುತ್ತಾರೆ ಡಾ. ನಿಶ್ಚಿತಾ.
ಈ ಕ್ಲಿನಿಕಲ್ ಡಿಪ್ರೆಶನ್ನಿಂದ ಬಚಾವಾಗಲು ವ್ಯಾಯಾಮ ಮಾಡುವುದು ಉತ್ತಮ ಮಾರ್ಗ ಅಂತಾರೆ ತಜ್ಞ ಮನಶಾಸ್ತ್ರಜ್ಞರು. ಅದರಲ್ಲಿಯೂ ಪ್ರಾಣಾಯಾಮ ಮಾಡುವುದು ಉತ್ತಮ ಅನ್ನೋ ಸಲಹೆ ಇದೆ. ಅದರ ಜೊತೆಗೆ ತಮ್ಮನ್ನ ತಾವು ಬೆಳಕಿಗೆ ಒಗ್ಗಿಸಿಕೊಳ್ಳಬೇಕು, ಅಂದ್ರೆ ಸೂರ್ಯನ ಕಿರಣಗಳು ದೇಹ ಸ್ಪರ್ಶಿಸಬೇಕು.ಬಿಸಿಲಲ್ಲಿ ವಿಟಮಿನ್ ಡಿ3 ಸಿಗುತ್ತೆ ಖಿನ್ನತೆಯ ಹೊಡೆದು ಓಡಿಸಲು ಇದು ಅತಿ ಅವಶ್ಯಕ. ಧೂಮಪಾನ ಬಿಡಬೇಕು, ಪೌಷ್ಠಿಕಾಂಶ ಹೆಚ್ಚು ಇರುವ ಆಹಾರ ಸೇವನೆ ಮಾಡೋದ್ರಿಂದ ಕ್ಲಿನಿಕಲ್ ಡಿಪ್ರೆಶನ್ ಕೊನೆ ಹಾಡಬಹುದು.