ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ನಾವು ಅದರ ಅಡಿಯಾಳಾಗಿ ಮಾರ್ಪಡುತ್ತಿದ್ದೇವೆ ಎಂಬುದು ಕಹಿ ಸತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್ ಎಂಬುದು ಪವಾಡವನ್ನುಂಟು ಮಾಡುತ್ತಿದೆ. ನಾವು ನಮ್ಮವರ ಮುಖವನ್ನು ನೋಡುತ್ತೇವೆಯೋ ಇಲ್ಲವೋ ಆದರೆ ಮೊಬೈಲ್ ಸ್ಕ್ರೀನ್ ಅನ್ನು ದಿನಕ್ಕೆ ಅದೆಷ್ಟು ಬಾರಿ ನೋಡುತ್ತೇವೆಯೋ ಎಂಬುದು ನಮಗೆ ಅಂದಾಜಿರುವುದಿಲ್ಲ.
ದೊಡ್ಡವರಂತೆ ಮಕ್ಕಳು ಕೂಡ ಇದೀಗ ಮೊಬೈಲ್ ಗೀಳನ್ನೇ ಅಂಟಿಸಿಕೊಂಡಿದ್ದು, ಮನೆಯಲ್ಲಿ ಹಿರಿಯನ್ನು ಅನುಕರಿಸುವ ಮಕ್ಕಳು, ಆಟ, ಪಾಠ, ಇನ್ನಿತರ ಬಾಲ್ಯದ ಚಟುವಟಿಕೆಗಳನ್ನು ಬಿಟ್ಟು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಒಂದೆಡೆ ಕುಳಿತುಬಿಡುತ್ತಾರೆ.
ಆದರೆ ಈಗೀಗ ನಡೆಸಿದ ಒಂದು ಸಂಶೋಧನೆಯ ಪ್ರಕಾರ ಮೊಬೈಲ್‌ನ ಅತಿಯಾದ ಬಳಕೆಯು ಮಕ್ಕಳಲ್ಲಿ ಅವರ ಅರಿವಿನ ಕಾರ್ಯನಿರ್ವಹಣೆಯ ಮೇಲೆ ಹಾಗೂ ಭಾಷೆಯ ಬೆಳವಣಿಗೆಯಲ್ಲಿ ತೊಡಕನ್ನುಂಟು ಮಾಡುತ್ತದೆ ಎಂದು ತಿಳಿಸಿದೆ. ಎಸ್ಟೋನಿಯಾದ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಮಕ್ಕಳಿರುವ ಮನೆಗಳಲ್ಲಿ ಅಧಿಕವಾಗಿ ಮೊಬೈಲ್ ಬಳಸುವ ಪೋಷಕರಿಗೆ ಇದೊಂದು ಎಚ್ಚರಿಕೆಯಾಗಿದೆ ಎಂದು ತಿಳಿಸಿದ್ದು, ಮಕ್ಕಳಲ್ಲಿ ಇದು ಕಳಪೆ ಭಾಷಾ ಕೌಶಲ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಅಧ್ಯಯನದ ಪ್ರಮುಖ ಲೇಖಕರಾದ ಟಾರ್ಟು ವಿಶ್ವವಿದ್ಯಾನಿಲಯದ ಡಾ. ಟಿಯಾ ತುಲ್ವಿಸ್ಟೆ, ಮಕ್ಕಳು ತಮ್ಮ ಪೋಷಕರಿಂದಲೇ ಅತಿಯಾಗಿ ಮೊಬೈಲ್ ಬಳಸುವ ಚಟವನ್ನು ಕಲಿತಿರುತ್ತಾರೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಸಂಸ್ಕೃತಿಗಳಲ್ಲಿ, ಭಾಷಾ ಬೆಳವಣಿಗೆಯು ಪೋಷಕರೊಂದಿಗೆ ಸಂಭಾಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಂಭವಿಸುತ್ತದೆ. ಇದು ಚಿಕ್ಕ ವಯಸ್ಸಿನಲ್ಲಿಯೇ ಶಬ್ದಕೋಶ ಮತ್ತು ವ್ಯಾಕರಣ ರಚನೆಯ ಬೆಳವಣಿಗೆಗೆ ಒತ್ತು ನೀಡುತ್ತದೆ. ಇದರ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಲು, ಸಂಶೋಧಕರು ತಮ್ಮ ಸ್ಕ್ರೀನ್ ಟೈಮಿಂಗ್‌ನ ಪ್ರಾಮುಖ್ಯತೆಗೆ ಅನುಗುಣವಾಗಿ ಪೋಷಕರು ಮತ್ತು ಮಕ್ಕಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದ್ದಾರೆ. ಯಾವ ಮಕ್ಕಳು ಹೆಚ್ಚು ಮೊಬೈಲ್ ಪೋನ್‌ಗಳಲ್ಲಿ ವ್ಯಸ್ತರಾಗಿರುತ್ತಾರೋ ಅಂತಹ ಮಕ್ಕಳಲ್ಲಿ ಭಾಷೆಯ ಬೆಳವಣಿಗೆಯ ತೊಡಕಿದೆ ಎಂದು ಅಧ್ಯಯನ ಮಾಡಲಾಗಿದೆ.