ಬೆಂಗಳೂರು: ರಿಷಭ್ ಪಂತ್, ಸರ್ಫರಾಜ್ ಖಾನ್ ಅವರ ಅಮೋಘ ಬ್ಯಾಟಿಂಗ್‌ನೊಂದಿಗೆ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದರೂ ಸೋಲಿನ ಸುಳಿಗೆ ಸಿಲುಕಿದೆ.
125 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ ಟೀಂ ಇಂಡಿಯಾ 4ನೇ ದಿನದಾಟದಲ್ಲಿ ಒಟ್ಟು 99.3 ಓವರ್‌ಗಳಲ್ಲಿ 462 ರನ್ ಗಳಿಸುವ ಮೂಲಕ ಕಿವೀಸ್ ವಿರುದ್ಧ 107 ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 4ನೇ ದಿನದಾಟ ಮುಕ್ತಾಯಗೊಂಡಿದೆ. 2ನೇ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ 4 ಎಸೆತಗಳನ್ನು ಎದುರಿಸುತ್ತಿದ್ದಂತೆ ಮಂದ ಬೆಳಕು ಕಾರಣ ನೀಡಿ ಪಂದ್ಯವನ್ನು ಮೊಟಕುಗೊಳಿಸಲಾಯಿತು. ಈ ವೇಳೆ ಟೀಂ ಇಂಡಿಯಾ ಆಟಗಾರರು ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದರೂ ಪ್ರಯೋಜನವಾಗಲಿಲ್ಲ. ಇದಾದ ಕೆಲವೇ ಕ್ಷಣಗಳಲ್ಲಿ ಮಳೆ ಆವರಿಸಿದ್ದರಿಂದ ಪಂದ್ಯವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಮೊಟಕುಗೊಳಿಸಲಾಯಿತು.
ಪಂತ್ ಬಳಿಕ ಟೀಂ ಇಂಡಿಯಾ ಪತನ:
4ನೇ ದಿನ ಕ್ರೀಸ್ ಆರಂಭಿಸಿದ ರಿಷಭ್ ಪಂತ್ ಹಾಗೂ ಸರ್ಫರಾಜ್ ಜೋಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. 211 ಎಸೆತಗಳಲ್ಲಿ ಈ ಜೋಡಿ 177 ರನ್ ಕಲೆಹಾಕಿತ್ತು. ಕಿವೀಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಿದ್ದ ಸರ್ಫರಾಜ್ ಖಾನ್ ಭರ್ಜರಿ 150 ರನ್ (195 ಎಸೆತ, 3 ಸಿಕ್ಸರ್, 18 ಬೌಂಡರಿ) ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ಶತಕ ಸಿಡಿಸುವ ಉತ್ಸಾಹದಲ್ಲಿದ್ದ ರಿಷಭ್ ಪಂತ್ 99 ರನ್ (105 ಎಸೆತ, 9 ಬೌಂಡರಿ, 5 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಪಂತ್ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಪತನ ಶುರುವಾಯಿತು. ನಂತರ ಕಣಕ್ಕಿಳಿದ ಯಾವೊಬ್ಬ ಆಟಗಾರರು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ ಮುಂದಿನ 38 ರನ್ ಗಳಿಸುವಷ್ಟರಲ್ಲಿ ಉಳಿದ 5 ವಿಕೆಟ್‌ಗಳೂ ಪತನಗೊಂಡಿತು. ಇದರಿಂದ 2ನೇ ಇನ್ನಿಂಗ್ಸ್‌ನಲ್ಲಿ 462 ರನ್ ಗಳಿಸಿದ ಭಾರತ 107 ರನ್‌ಗಳ ಅಲ್ಪ ಮುನ್ನಡೆ ಕಾಯ್ದುಕೊಂಡಿತು.
ಭಾರತ ಪರ 2ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 52 ಎಸೆತಗಳಲ್ಲಿ 35 ರನ್, ರೋಹಿತ್ ಶರ್ಮಾ 52 ರನ್ (63 ಎಸೆತ, 1 ಸಿಕ್ಸರ್, 8 ಬೌಂಡರಿ), ಕೊಹ್ಲಿ 70 ರನ್ (102 ಎಸೆತ, 1 ಸಿಕ್ಸರ್, 8 ಬೌಂಡರಿ), ಕೆ.ಎಲ್ ರಾಹುಲ್ 12 ರನ್, ಅಶ್ವಿನ್ 15 ರನ್ ಗಳಿಸಿದ್ರೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಶೂನ್ಯ ಸುತ್ತಿದರು. ಕುಲ್ದೀಪ್ ಯಾದವ್ 5 ರನ್ ಗಳಿಸಿ ಅಜೇಯರಾಗುಳಿದರು.
ಕಿವೀಸ್ ಪರ ವೇಗಿ ಮ್ಯಾಟ್ ಹೆನ್ರಿ, ವಿಲ್ ಒ ರೂರ್ಕಿ ತಲಾ ಮೂರು ವಿಕೆಟ್ ಕಿತ್ತರೆ, ಆಝ್ ಪಟೇಲ್ 2 ವಿಕೆಟ್, ಟಿಮ್ ಸೌಥಿ ಮತ್ತು ಗ್ಲೆನ್ ಫಿಲಿಪ್ಸ್ ತಲಾ ಒಂದು ವಿಕೆಟ್ ಕಿತ್ತರು.
ಮೊದಲ ಇನ್ನಿಂಗ್ಸ್‌ನಲ್ಲಿ ರಚಿನ್ ಭರ್ಜರಿ ಶತಕ:
ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪರ ರಚಿನ್ ರವೀಂದ್ರ ಭರ್ಜರಿ 137 ರನ್ (157 ಎಸೆತ, 13 ಬೌಂಡರಿ, 4 ಸಿಕ್ಸರ್) ಚಚ್ಚಿದರು. ಇನ್ನುಳಿದಂತೆ ಡಿವೋನ್ ಕಾನ್ವೆ 91 ರನ್ (105 ಎಸೆತ, 3 ಸಿಕ್ಸರ್, 11 ಬೌಂಡರಿ), ಟಿಮ್ ಸೌಥಿ 65 ರನ್ (73 ಎಸೆತ, 5 ಬೌಂಡರಿ, 4 ಸಿಕ್ಸರ್), ವಿಲ್ ಯಂಗ್ 33 ರನ್, ಟಾಮ್ ಲಾಥಮ್ 15 ರನ್, ಡೇರಿಲ್ ಮಿಚೆಲ್ 18 ರನ್, ಗ್ಲೆನ್ ಫಿಲಿಪ್ಸ್ 14 ರನ್, ಮ್ಯಾಟ್ ಹೆನ್ರಿ 8 ರನ್, ಆಜಾಜ್ ಪಟೇಲ್ 4 ರನ್, ಟಾಮ್ ಬ್ಲಂಡೆಲ್ 5 ರನ್ ಗಳಿಸಿದ್ದರು. 91.3 ಓವರ್‌ಗಳಲ್ಲಿ 402 ರನ್ ಗಳಿಸಿದ್ದ ಕಿವೀಸ್ ಟೀಂ ಇಂಡಿಯಾ ವಿರುದ್ಧ 356 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿತ್ತು.
46ಕ್ಕೆ ನೆಲಕಚ್ಚಿದ್ದ ಭಾರತ:
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ತವರಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ 3ನೇ ಅತೀ ಕಡಿಮೆ ರನ್ ಗಳಿಸಿದ ಕೆಟ್ಟ ದಾಖಲೆಯನ್ನೂ ಹೆಗಲಿಗೇರಿಸಿಕೊಂಡಿತು.
ಟೀಂ ಇಂಡಿಯಾ ಕಳಪೆ ರನ್ ಗಳಿಸಿದ ಪಂದ್ಯಗಳು
* 36 ರನ್ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್ ಮೈದಾನ (2020)
* 42 ರನ್ – ಇಂಗ್ಲೆಂಡ್ ವಿರುದ್ಧ – ಲಾರ್ಡ್ಸ್ ಮೈದಾನ (1974
* 46 ರನ್ – ನ್ಯೂಜಿಲೆಂಡ್ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
* 58 ರನ್ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್(1952)
* 66 ರನ್ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್ ಮೈದಾನ (1996)
ಸಂಕ್ಷಿಪ್ತ ಸ್ಲೋರ್:
ಮೊದಲ ಇನ್ನಿಂಗ್ಸ್
ಭಾರತ – 46/10
ನ್ಯೂಜಿಲೆಂಡ್ – 402/10
2ನೇ ಇನ್ನಿಂಗ್ಸ್
ಭಾರತ – 462/10