Colors Kannada ಜೊತೆಗಿನ ದಶಕದ ಪಯಣಕ್ಕೆ ನಿರಂಜನ್‌ ದೇಶಪಾಂಡೆ ಗುಡ್‌ ಬೈ, ತವರು ಜೀ ಕನ್ನಡಕ್ಕೆ ಮರಳಿದ ನಿರೂಪಕ!

public wpadmin

ಕನ್ನಡ ಪ್ರಮುಖ ನಿರೂಪಕರಲ್ಲಿ ನಿರಂಜನ್‌ ದೇಶಪಾಂಡೆ ಸಹ ಒಬ್ಬರು. ರಂಗಭೂಮಿಯಲ್ಲಿ ಗುರುತಿಸಿಕೊಂಡು, ಕಿರುತೆರೆಯಲ್ಲಿಯೂ ನಟಿಸಿ, ಇದೀಗ ನಿರೂಪಕನಾಗಿ ಕನ್ನಡದ ಮನೆ ಮನಗಳನ್ನು ತಲುಪಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ತಮ್ಮ ನಿರೂಪಣೆ ಜರ್ನಿಯನ್ನು ಜೀ ಕನ್ನಡದಿಂದಲೇ ಆರಂಭಿಸಿದ್ದ ನಿರಂಜನ್‌, ಇತ್ತೀಚಿನ ಕೆಲ ವರ್ಷಗಳಿಂದ ಜೀ ಕನ್ನಡದ ಬದಲು ಕಲರ್ಸ್‌ ಕನ್ನಡದ ಆಜೀವ ಸದಸ್ಯನಂತಿದ್ದರು.

ಇದೀಗ ಒಂದು ಬದಲಾವಣೆಯತ್ತ ಅವರು ಹೊರಳಿದ್ದಾರೆ. ಕಲರ್ಸ್‌ ಕನ್ನಡದ ಜತೆಗಿನ ಸುದೀರ್ಘ ಪಯಣಕ್ಕೆ ಬ್ರೇಕ್‌ ಹಾಕಿ, ತವರಿಗೆ ಮರಳಿದ್ದಾರೆ! ಅಂದರೆ, ಭರ್ಜರಿ ಬ್ಯಾಚುಲರ್ಸ್ ಸೀಸನ್‌ 2 ಮೂಲಕ ಆಗಮಿಸಿದ್ದಾರೆ.

ನಿರಂಜನ್‌ ದೇಶಪಾಂಡೆ, ಕಲರ್ಸ್‌ ಕನ್ನಡದಲ್ಲಿನ ಹಲವು ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡಿದ್ದಾರೆ. ಮಾತಿನ ಮೂಲಕವೇ ಕಚಗುಳಿ ಇಡುತ್ತ, ಮಾತಿನಿಂದಲೇ ಎಲ್ಲರನ್ನು ಸೆಳೆಯುವ ಇದೇ ಮಾತುಗಾರ ಇದೀಗ ಜೀ ಕನ್ನಡಕ್ಕೆ ಆಗಮಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ರ ನಿರೂಪಕರಾಗಿದ್ದಾರೆ. ಈ ಮೊದಲು ಮೊದಲನೇ ಸೀಸನ್‌ನಲ್ಲಿ ಅಕುಲ್‌ ಬಾಲಾಜಿ ನಿರೂಪಣೆ ಮಾಡುತ್ತಿದ್ದರು. ಇದೀಗ ಅವರ ಜಾಗಕ್ಕೆ ನಿರಂಜನ್‌ ಆಗಮಿಸಿದ್ದಾರೆ. ಈ ನಡುವೆ ಲೈವ್‌ಗೆ ಬಂದ ನಿರಂಜನ್‌, ನಾನ್ಯಾಕೆ ಕಲರ್ಸ್‌ ಕನ್ನಡ ಬಿಟ್ಟು ಬಂದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.

ದಶಕದ ಬಳಿಕ ಜೀ ಕನ್ನಡಕ್ಕೆ

“ಸರಿಸುಮಾರು 8 ರಿಂದ 10 ವರ್ಷ ಆದ್ಮೇಲೆ ಜೀ ಕನ್ನಡಕ್ಕೆ ನಿರೂಪಕನಾಗಿ ಬರುತ್ತಿದ್ದೇನೆ. ಈಗಾಗಲೇ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 1ರ ಆಂಕರಿಂಗ್ ಅನ್ನು ಅಕುಲ್ ಬಾಲಾಜಿ ಅವರು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಒಂದು ಬೆಂಚ್‌ ಮಾರ್ಕ್‌ ಸೆಟ್‌ ಮಾಡಿ ಹೋಗಿದ್ದಾರೆ. ಅಕುಲ್ ಅವರಷ್ಟು ಚೆನ್ನಾಗಿ ಮಾಡೋದಕ್ಕೆ ಬರದೇ ಇರಬಹುದು. ಆದ್ರೆ ತಕ್ಕಮಟ್ಟಿಗೆ ಮಾಡುತ್ತೇನೆ. ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ನಿಮ್ಮೆಲ್ಲರಿಗೂ ಸಿಕ್ಕಾಪಟ್ಟೆ ಮನರಂಜನೆ ಕೊಡೋದೇ ನನ್ನ ಒಂದು ಧ್ಯೇಯ. ಜೀ ಕನ್ನಡಕ್ಕೆ ಮರಳಿ ಬಂದಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ” ಎಂದಿದ್ದಾರೆ.

ಲೈವ್‌ನಲ್ಲಿ ನಿರಂಜನ್‌ ಹೇಳಿದ್ದೇನು?

“ಮೊದಲನೆಯದಾಗಿ ನನ್ನನ್ನ ಬರಮಾಡಿಕೊಂಡ ಜೀ ಕನ್ನಡ ವಾಹಿನಿಗೆ ತುಂಬು ಹೃದಯದ ಧನ್ಯವಾದಗಳು. ನನ್ನ ಪರಿಚಯ ಎಲ್ಲರಿಗೂ ಇರುತ್ತದೆ. ಎಂದು ನಾನು ಭಾವಿಸಿದ್ದೇನೆ. ಗೊತ್ತಿಲ್ಲ ಎಂದಾದರೆ, ನಾನು ನಿರಂಜನ್‌ ದೇಶಪಾಂಡೆ. ಎಲ್ಲರಿಗೂ ನಮಸ್ಕಾರ.. ನಿರೂಪಕನಾಗಿ, ನಟನಾಗಿ, ರೇಡಿಯೋ ಜಾಕಿಯಾಗಿ, ಥಿಯೇಟರ್ ಆರ್ಟಿಸ್ಟ್ ಆಗಿ ಕೂಡ ಕೆಲಸ ಮಾಡಿದ್ದೇನೆ. ಕೆಲವು ವರ್ಷಗಳಿಂದ ಆಂಕರಿಂಗ್ ಅನ್ನು ನ್ಯಾಯಯುತವಾಗಿ ಮಾಡಿಕೊಂಡು ಬಂದಿದ್ದೇನೆ. ನನ್ನ ಲೈಫ್‌ನಲ್ಲಿ ಮೊದಲ ಸಲ ಆಂಕರಿಂಗ್ ಅಂತ ಶುರು ಮಾಡಿದ್ದ ರಿಯಾಲಿಟಿ ಶೋ ‘ಪರದೇಶದಲ್ಲಿ ಪರದಾಟ’.. ಅದು ಜೀ ಕನ್ನಡದ್ದೇ. ಹೀಗಾಗಿ, ಈಗ ತವರು ಮನೆಗೆ ವಾಪಸ್ ಬಂದ ಹಾಗಾಗಿದೆ”

Share This Article
Leave a comment