ಚಿತ್ರದುರ್ಗ: ಸರ್ಕಾರಿ ಕಾಲೇಜಲ್ಲಿ ಸೀಟು ಸಿಕ್ಕರೆ ಎಲ್ಲಾ ಉಚಿತ ಅನ್ನೋ ಮಾತಿದೆ. ಆದರೆ ಚಿತ್ರದುರ್ಗದ ಸರ್ಕಾರಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಕಟ್ಟಡವೇ ಇಲ್ಲ. ಹೀಗಾಗಿ ಇಷ್ಟಪಟ್ಟು ನರ್ಸಿಂಗ್ ಮಾಡಲು ಬಂದ ವಿದ್ಯಾರ್ಥಿಗಳು ಕಿಷ್ಕಿಂದೆಯಂತಹ ಕೊಠಡಿಯಲ್ಲಿ ಹರಸಾಹಸಪಟ್ಟು ಓದೋದೇ ದೊಡ್ಡ ಸವಾಲಾಗಿದೆ.
ಚಿತ್ರದುರ್ಗ (Chitradurga) ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಬಿಎಸ್ಸಿ ನರ್ಸಿಂಗ್ ಕಾಲೇಜಲ್ಲಿ ಕಳೆದ ಮೂರು ವರ್ಷಗಳಿಂದಲೂ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲ. ಸುಸಜ್ಜಿತ ಕಟ್ಟಡ, ಕೊಠಡಿ, ಲ್ಯಾಬ್ ವ್ಯವಸ್ಥೆಯೂ ಇಲ್ಲ. ಬಿಎಸ್‌ಸಿ ನರ್ಸಿಂಗ್ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದೇ ಕಟ್ಟಡದಲ್ಲಿ ನಡೆಯುತ್ತಿದೆ. ಸುಮಾರು 240 ವಿದ್ಯಾರ್ಥಿಗಳು ಒಂದೇ ಕೊಠಡಿಯೊಳಗೆ ಕುಳಿತು ಪಾಠ ಕೇಳುತ್ತಿದ್ದಾರೆ.
ಈ ಬಗ್ಗೆ ಕ್ಷೇತ್ರದ ಶಾಸಕ ವೀರೇಂದ್ರ, ಡಿಸಿ ವೆಂಕಟೇಶ್ ಹಾಗು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆ ಸರ್ಜನ್‌ಗೆ ಕೇಳಿದರೆ ಎಲ್ಲೋ ಒಂದು ಮೂಲೆಯಲ್ಲಿ ಸುಮ್ಮನೆ ಪಾಠ ಕೇಳಿ ಅಂತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.
ಈ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳನ್ನು ಕೇವಲ ಉಚಿತ ಸೇವೆಗಾಗಿ ಬಳಸಿಕೊಳ್ಳುವ ಆರೋಗ್ಯ ಇಲಾಖೆ, ಇವರ ಸಂಕಷ್ಟ ಬಗೆಹರಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಸರ್ಜನ್ ಡಾ.ರವಿಂದ್ರ ಅವರನ್ನು ಕೇಳಿದರೆ ಹೊಸ ಮೆಡಿಕಲ್ ಕಾಲೇಜು ಕಾಮಗಾರಿ ಭರದಿಂದ ಸಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಆಸ್ಪತ್ರೆಯಲ್ಲಿ ಕಾಲೇಜು ನಡೆಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಇದನ್ನು ಸಹಿಸಿಕೊಂಡು ಓದಲಾಗದೇ ಸಮಸ್ಯೆ ಸೃಷ್ಟಿಸಿದ್ದಾರೆಂದು ಕಾರಣ ಹೇಳುತ್ತಾರೆ.