Beauty Tips: ತಲೆಯಲ್ಲಿ ಬಿಳಿ ಕೂದಲು ಜಾಸ್ತಿ ಆಗ್ತಿದ್ಯಾ? ಕಾಫಿ ಪುಡಿಗೆ ಇವುಗಳನ್ನು ಮಿಕ್ಸ್​ ಮಾಡಿ ಹಚ್ಚಿ, ಕಡುಕಪ್ಪಾದ ಕೂದಲು ನಿಮ್ಮದಾಗುತ್ತೆ!

public wpadmin

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೇವಲ 30-35 ವರ್ಷ ದಾಟುವಷ್ಟರಲ್ಲೇ ಬಿಳಿ ಕೂದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಿಳಿ ಕೂದಲುಗಳನ್ನು ಮರೆಮಾಚಲು ಬಹುತೇಕ ಮಂದಿ ಹೇರ್​ ಕಲರ್ (Hair Colour) ಮತ್ತು ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳ ದೀರ್ಘಕಾಲ ಬಳಕೆ ಕೂದಲಿಗೆ ಹಾನಿಯುಂಟು ಮಾಡುತ್ತದೆ. ಬಿಳಿ ಕೂದಲನ್ನು ಮರೆಮಾಚಲು ಹೆಚ್ಚು ಹೇರ್ ಕಲರಿಂಗ್ ಬಳಸುವುದು, ಕೂದಲು ಉದುರುವಿಕೆ (Hair Fall) ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಾಗಿ ಇವುಗಳ ಬದಲಿಗೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಿಕೊಳ್ಳಲು ಒಂದಷ್ಟು ಸಲಹೆಗಳನ್ನು ಅನುಸರಿಸಬೇಕು. ಅದರಲ್ಲೂ ಕಾಫಿ ಪುಡಿಯೊಂದಿಗೆ ಒಂದಷ್ಟು ಪದಾರ್ಥಗಳನ್ನು ಮಿಕ್ಸ್ ಮಾಡಿ, ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲ ಸಮಸ್ಯೆ ನಿವಾರಣೆ ಆಗುತ್ತದೆ.

ಮೊದಲು ಸ್ಟವ್​ ಆನ್ ಮಾಡಿ, ಅದರ ಮೇಲೆ ಒಂದು ಪಾತ್ರೆಯನ್ನು ಇಡಿ. ನಂತರ ಪಾತ್ರೆಯೊಳಗೆ ನೀರನ್ನು ಸುರಿದು, 2 ಚಮಚ ಕಾಫಿ ಪುಡಿಯನ್ನು ಮಿಶ್ರಣ ಮಾಡಿ. ಈಗ ಕೆಲವು ನಿಮಿಷಗಳ ಕಾಲ ಈ ನೀರು ಕುದಿಯಲು ಬಿಟ್ಟು, ನಂತರ ಆ ನೀರಿನಲ್ಲಿ ಅರ್ಧ ಕಪ್ ಗೋರಂಟಿ (ಮೆಹಂದಿ) ಪುಡಿಯನ್ನು ಮಿಶ್ರಣ ಮಾಡಿ. ಗೋರಂಟಿ ಪುಡಿಯನ್ನು ನೀರಿನೊಂದಿಗೆ ಬೆರೆಸಿದಾಗ ಅದು ಗಟ್ಟಿಯಾಗಲು ಪ್ರಾರಂಭವಾಗುತ್ತದೆ. ಇದೇ ವೇಳೆ ನೀರು ಕುದಿಯುತ್ತಿದ್ದಂತೆಯೇ ಇವುಗಳ ಜೊತೆಗೆ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ನೆಲ್ಲಿಕಾಯಿ ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಅಲ್ಲದೇ ಇದು ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ.

ನಂತರ, ಸ್ಟವ್ ಆಫ್ ಮಾಡುವ ಮುನ್ನ, ಪೇಸ್ಟ್ ಗಟ್ಟಿ ಆಗಿದ್ಯಾ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಬಳಿಕ ಸ್ಟವ್ ಆಫ್ ಮಾಡಿ, ಒಂದು ಅಥವಾ ಎರಡು ನಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ. ಉತ್ತಮ ಫಲಿತಾಂಶಕ್ಕಾಗಿ ಈ ಪೇಸ್ಟ್ ಅನ್ನು ರಾತ್ರಿಯಿಡೀ ನೆನೆಯಲು ಬಿಟ್ಟು, ಮುಂಜಾನೆಯೇ ಕೂದಲಿಗೆ ಹಚ್ಚಿ ಅಥವಾ 3 ರಿಂದ 4 ಗಂಟೆಗಳ ಕಾಲ ನೆನೆಯಲು ಬಿಟ್ಟು ಬಳಿಕ ಸಹ ಕೂದಲಿಗೆ ಹಚ್ಚಬಹುದು.

ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚುವ ಮುನ್ನ ನಿಮ್ಮ ಕೂದಲನ್ನು ಚೆನ್ನಾಗಿ ವಾಶ್​ ಮಾಡಿ. ನಂತರ ಕೂದಲನ್ನು ಒಣಗಿಸಿ, ಈ ಮಿಶ್ರಣವನ್ನು ಬ್ರಷ್​ನಿಂದ ತೆಗೆದುಕೊಂಡು ಬಿಳಿ ಕೂದಲಿನ ಮೇಲೆ ಹಚ್ಚಿ. ನಿಮ್ಮ ಕೂದಲನ್ನು ಎರಡು ಗಂಟೆಗಳ ಕಾಲ ನೆನೆಸಿ. ನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಆದರೆ ನಿಮ್ಮ ಕೂದಲನ್ನು ತೊಳೆಯುವಾಗ ಶಾಂಪೂ ಬಳಸಬಾರದು ಎಂಬುವುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅದರಲ್ಲೂ ಮುಖ್ಯವಾಗಿ ನಿಮ್ಮ ಕೂದಲನ್ನು ಬಿಸಿನೀರು ಬಳಸದೇ ಸಾಮಾನ್ಯವಾದ ನೀರಿನಲ್ಲಿ ತೊಳೆಯಿರಿ. ಈ ಪೇಸ್ಟ್ ಅನ್ನು ನಿಯಮಿತವಾಗಿ ಕೂದಲಿಗೆ ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಜೊತೆಗೆ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.

Share This Article
Leave a comment