IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು; ಭಾರತದ ಮುಡಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಇತಿಹಾಸ ರಚಿಸಿದೆ. ಸತತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದ್ದ ಭಾರತ 2013ರ ಬಳಿಕ ಎರಡನೇ ಬಾರಿ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಭಾರತ ಒಟ್ಟಾರೆ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 251 ರನ್ ಕಲೆಹಾಕಿತು. ನ್ಯೂಜಿಲೆಂಡ್ ಉತ್ತಮ ಆರಂಭ ಪಡೆದರೂ ಬಳಿಕ ಸ್ಪಿನ್ ದಾಳಿ ಎದುರು ರನ್ ಗಳಿಸಲು ಪರದಾಡಿತು. ರಚಿನ್ ರವೀಂದ್ರ 29 ಎಸೆತಗಳಲ್ಲಿ 39 ರನ್ ಗಳಿಸಿದರೆ, ಡೇರಿಲ್ ಮಿಚೆಲ್ 63 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 34 ರನ್ ಗಳಿಸಿದರೆ, ಮಿಚೆಲ್ ಬ್ರೇಸ್ವೆಲ್ 40 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ ಅಜೇಯ 53 ರನ್ ಗಳಿಸಿ ನ್ಯೂಜಿಲೆಂಡ್ ಸವಾಲಿನ ಮೊತ್ತ ಕಲೆಹಾಕಲು ಪ್ರಮುಖ ಪಾತ್ರ ವಹಿಸಿದರು.
ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು. ಸ್ಪಿನ್ನರ್ ಗಳು ಹೆಚ್ಚಿನ ರನ್ ಕೊಡದೆ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿದ್ದು ಭಾರತಕ್ಕೆ ಅನುಕೂಲವಾಯಿತು. ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಫೈನಲ್ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ ನಾಯಕನ ರೀತಿ ಜವಾಬ್ದಾರಿಯುತ ಆಟ ಆಡಿದರು. 83 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಸಹಿತ 76 ರನ್ ಗಳಿಸಿದರು. ಶುಭಮನ್ ಗಿಲ್ 31 ರನ್ ಗಳಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿ 1 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 48 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
ಅಕ್ಷರ್ ಪಟೇಲ್ ಕೂಡ 29 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು. ಕನ್ನಡಿಗ ಕೆಎಲ್ ರಾಹುಲ್ ಬಳಿಕ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು. ಹಾರ್ದಿಕ್ ಪಾಂಡ್ಯ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು. ಪಾಂಡ್ಯ 18 ಎಸೆತಗಳಲ್ಲಿ 18 ರನ್ ಗಳಿಸಿದರು.