ಯಾವಾಗಲೂ ಒಂದು ಸುಂದರವಾದ ಸಂಬಂಧ ನಿರ್ಮಾಣವಾಗುವುದು ನಂಬಿಕೆ (Trust) ಹಾಗೂ ವಿಶ್ವಾಸದಿಂದಾಗಿದೆ. ಸಂಬಂಧದಲ್ಲಿ (Relationship) ಏರಿಳಿತಗಳು ಸಹಜವಾಗಿದ್ದರೂ ಇದರಿಂದ ಸಂಬಂಧಕ್ಕೆ ಮಾರಕವಾಗಿರಬಹುದು. ಸಂಗಾತಿಗಳ ನಡುವಿನ ಪ್ರೀತಿ (Love), ವಿಶ್ವಾಸಕ್ಕೆ ಕೊರತೆಯುಂಟಾಗಬಾರದು. ಕೆಲವೊಂದು ಸಂಬಂಧಗಳು ಹೇಗೆಂದರೆ ಎಷ್ಟೇ ಪ್ಯಾಚಾಪ್ (Patch Up) ಮಾಡಿಕೊಂಡರೂ ಅದು ಬೇರ್ಪಡುತ್ತಲೇ ಇರುತ್ತದೆ. ಜಗಳಗಳು ನಡೆಯುವುದು ಸಾಮಾನ್ಯವಾಗಿದ್ದರೂ ಇಂತಹ ಸಂಬಂಧಗಳಲ್ಲಿ ಘರ್ಷಣೆ ಅತಿರೇಕವಾಗಿರುತ್ತದೆ. ಒಂದಾಗಿರಬೇಕು ಹಾಗೂ ಪರಸ್ಪರ ಅರಿತುಕೊಂಡು ಮುನ್ನಡೆಯಬೇಕು ಅಂತ ಎಷ್ಟೇ ಪ್ರಯತ್ನಿಸಿದರೂ ಸಂಬಂಧ ಹಳಿ ತಪ್ಪಿ ಹೋಗುತ್ತಿರುತ್ತದೆ. ಸದ್ಯ ಇಂದಿನ ಲೇಖನದಲ್ಲಿ ಇಂತಹ ಸಂಬಂಧಗಳ ಸೂಚನೆಗಳ ಬಗ್ಗೆ ತಿಳಿದುಕೊಳ್ಳೋಣ. ಇದು ನೀವು ಮುಂದೇನು ಮಾಡಬೇಕು ಎಂಬುದನ್ನು ತಿಳಿಸುತ್ತದೆ ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.
ಪದೇ-ಪದೇ ಬ್ರೇಕಪ್ ಮಾಡಿಕೊಳ್ಳುವುದು, ಮತ್ತೆ ಅದನ್ನು ಪ್ಯಾಚಪ್ ಮಾಡಿಕೊಳ್ಳುವುದು ಆಗಾಗ ನಡೆಯುತ್ತಲೇ ಇರುತ್ತದೆ. ಅಂದರೆ ಇದು ಪರಿಹರಿಸಿಕೊಳ್ಳಲು ಆಗದೇ ಇರುವ ಸಮಸ್ಯೆ ಆಗಿದೆ. ರಿಲೇಶನ್ ಶಿಪ್ನಲ್ಲಿ ಬ್ರೇಕಪ್ಗಳು ಸಾಮಾನ್ಯವಾಗಿದ್ದರೂ ಪದೇ ಪದೇ ನಡೆಯುವುದು ಆಳವಾದ ತಪ್ಪನ್ನು ಸೂಚಿಸುತ್ತದೆ. ಇಬ್ಬರೂ ಕಷ್ಟಪಟ್ಟುಕೊಂಡು ಹೊಂದಿಕೊಂಡು ಸಾಗುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ. ಇದರಿಂದ ನೀವು ಕಂಡುಕೊಂಡ ಪರಿಹಾರ ತಾತ್ಕಾಲಿಕವಾಗಿರುತ್ತದೆ.
ಸಂವಹನ ಪರಿಣಾಮಕಾರಿಯಾಗಿ ಇರುವುದಿಲ್ಲ
ಸಂವಹನದ ಕೊರತೆ ಕೂಡ ಸಂಬಂಧದಲ್ಲಿ ಏನೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ತಮ್ಮ ಆಲೋಚನೆ, ಭಾವನೆಗಳು ಹಾಗೂ ಅನುದಿನ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುತ್ತಿಲ್ಲ ಅಲ್ಲಿ ಮೌನವೇ ನಿರ್ಮಾಣವಾಗಿದೆ ಎಂದಾದರೆ ಕೂಡ ಸಂಬಂಧದಲ್ಲಿ ಇದು ಕಪ್ಪು ಚುಕ್ಕೆಯನ್ನು ತೋರಿಸುತ್ತದೆ. ಘರ್ಷಣೆಯ ಸಮಯದಲ್ಲಿ ಇಬ್ಬರೂ ಪರಸ್ಪರ ಕುಳಿತು ಮಾತನಾಡುವುದು ಬಿಟ್ಟು, ದೋಷಾರೋಪಣೆಯೇ ನಡೆಯುತ್ತಿದೆ ಎಂದಾದರೆ ಆ ಸಂಬಂಧ ಹಳಿ ತಪ್ಪಿದೆ ಎಂಬುದನ್ನು ಸೂಚಿಸುತ್ತದೆ.
ಸಂಬಂಧದಲ್ಲಿ ನಂಬಿಕೆ ವಿಶ್ವಾಸ ಕಡಿಮೆಯಾಗುತ್ತಿದೆ ಇಲ್ಲವೇ ಇಲ್ಲ ಎಂದಾದಾಗ ಕೂಡ ದಾಂಪತ್ಯ ಸರಿಯಾಗಿ ಮುನ್ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ನಂಬಿಕೆ ಇದ್ದಾಗ ಮಾತ್ರವೇ ಸುಂದರ ಸಂಬಂಧ ಚೆನ್ನಾಗಿ ಮುಂದುವರಿಯುತ್ತದೆ. ನಂಬಿಕೆಯೇ ಇಲ್ಲದ ಸಂಬಂಧ ಬಹು ಕಾಲ ನೆಲೆ ನಿಲ್ಲುವುದಿಲ್ಲ. ತಮ್ಮಲ್ಲಿ ನಂಬಿಕೆ, ವಿಶ್ವಾಸ ಇಲ್ಲದಾಗಲು ಕಾರಣ ಏನು ಎಂಬುದನ್ನು ದಂಪತಿಗಳು ಅರಿತುಕೊಂಡಿರಬೇಕು ಹಾಗೂ ಆ ನಂಬಿಕೆಯನ್ನು ಮರುಸ್ಥಾಪಿಸಲು ಗಂಡ ಹೆಂಡತಿ, ಸಂಗಾತಿಗಳು ಪ್ರಯತ್ನ ಪಡಬೇಕು.
ಇಬ್ಬರಲ್ಲೂ ಆತ್ಮೀಯತೆ ಇಲ್ಲ ಎಂದಾದಾಗ ಕೂಡ ಆ ಸಂಬಂಧವನ್ನು ಸರಿಪಡಿಸಲಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಆತ್ಮೀಯತೆ ಇಲ್ಲದಿದ್ದಾಗ ಸಂಬಂಧದಲ್ಲಿನ ಸಮಸ್ಯೆಗಳನ್ನು ಕುಳಿತು ಮಾತನಾಡಲು ಆಗುವುದಿಲ್ಲ. ಸಂಗಾತಿಗಳು ಇಲ್ಲಿ ಮುಕ್ತರಾಗುವುದಿಲ್ಲ ತಮ್ಮ ತಮ್ಮ ಸಮಸ್ಯೆಗಳನ್ನು ಸ್ವತಂತ್ರವಾಗಿ ಚರ್ಚಿಸುವುದಿಲ್ಲ. ಆತ್ಮೀಯತೆ ಎಂಬುದು ಇಬ್ಬರೂ ಸಂಗಾತಿಗಳಲ್ಲೂ ಮುಖ್ಯವಾಗಿ ಬೇಕಾಗುತ್ತದೆ. ಇಬ್ಬರಲ್ಲಿ ಒಬ್ಬರು ಕೂಡ ಆತ್ಮೀಯತೆಯನ್ನು ತೋರ್ಪಡಿಸದಿದ್ದರೆ ಇದರಿಂದ ಸುರಕ್ಷತೆಯ ಭಾವನೆ ಕಾಡುತ್ತದೆ. ಸಂಬಂಧದಲ್ಲಿ ಆತ್ಮೀಯತೆ ಇಲ್ಲದಿದ್ದರೆ ಆ ಸಂಬಂಧ ಬೇಗನೇ ವಿಘಟನೆಯಾಗುತ್ತದೆ.
ಇನ್ನೊಬ್ಬ ವ್ಯಕ್ತಿಯಂತೆ ತಮ್ಮ ಸಂಗಾತಿ ಇರಬೇಕೆಂದು ಕನಸು ಕಾಣುವುದು ಕೂಡ ಸಂಬಂಧವನ್ನು ಹಾಳುಮಾಡುತ್ತದೆ. ನಿಮ್ಮಿಷ್ಟದಂತೆ ನಿಮ್ಮ ಸಂಗಾತಿ ಇಲ್ಲ ಎಂಬ ಭಾವನೆ ನಿಮ್ಮ ಮನದಲ್ಲಿ ತೋರಿದಂತೆ ಅವರ ಬಗ್ಗೆ ನಿಮಗೆ ಕೀಳರಿಮೆ ಉಂಟಾಗಲಾರಂಭಿಸುತ್ತದೆ. ಅವರಂತೆ ಇವರು ಏಕಿಲ್ಲ ಎಂಬ ಯೋಚನೆಯೇ ನಿಮಗವರು ಸರಿಯಾದ ವ್ಯಕ್ತಿಯಲ್ಲ ಎಂಬ ಅನಿಸಿಕೆಯನ್ನುಂಟು ಮಾಡುತ್ತದೆ.
ಇತರರ ಹಾಗೆಯೇ ನಿಮ್ಮ ಸಂಗಾತಿ ಇರಬೇಕೆಂದು ಭಾವಿಸುವುದು ತಪ್ಪಾಗಿದೆ ಏಕೆಂದರೆ ಪ್ರತಿಯೊಬ್ಬರು ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗಾಗಿ ಒಬ್ಬರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಕೆಲವೊಂದು ಸಮಸ್ಯೆಗಳಿಗೆ ಸಮಯ ಬೇಕಾಗುತ್ತದೆ ಇದರೊಂದಿಗೆ ಮುಕ್ತ ಮಾತುಕತೆ, ಮಧ್ಯಸ್ಥಿಕೆ,ಮ ತಜ್ಞರ ಸಮಾಲೋಚನೆ ನಡೆಸುವುದು ಕೂಡ ದಾಂಪತ್ಯವನ್ನು ಭದ್ರಗೊಳಿಸುತ್ತದೆ.