ಬೆಳಗಾವಿ: ನಗರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ (Assault) ಮಾಡಿದ ಘಟನೆ ನಗರದ ವಡ್ಡರವಾಡಿಯಲ್ಲಿ ನಡೆದಿದೆ.
ಮಗಳು ವೇಶ್ಯಾವಾಟಿಕೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಮನೆಗೆ ನುಗ್ಗಿ ಎಳೆದು ತಂದು ತಾಯಿ, ಮಗಳ ಮೇಲೆ ಮನೆಯ ಪಕ್ಕದ ಅಷ್ಟೇಕರ್ ಕುಟುಂಬ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ತಾಯಿ ಮತ್ತು ಮಗಳು ಎರಡು ದಿನ ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾರೆ. ಆದರೆ ಠಾಣೆಯಲ್ಲಿ ದೂರು ಸ್ವೀಕರಿಸದ ಕಾರಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ ಮೂವರ ವಿರುದ್ದ ಕೇಸ್ ದಾಖಲಾಗಿದೆ.
ಬಾಲಕಿಯ ಜೊತೆಗೆ ನಾಲ್ಕು ವರ್ಷದಿಂದ ತಾಯಿ ಮಗಳು ಮನೆಯಲ್ಲಿ ವಾಸವಾಗಿದ್ದಾರೆ. ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ತೋರಿ ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ.
ಸಂಬಂಧ ಇಲ್ಲದವರು ಮನೆಗೆ ಬಂದು ಹೋಗುತ್ತಿದ್ದಾರೆ. ವೇಶ್ಯಾವಾಟಿಕೆ ಮಾಡುತ್ತಿದ್ದೀರಿ ಎಂದು ಆರೋಪಿಸಿ ನಮ್ಮ ಮೇಲೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ನಾವು ಇರುವ ಮನೆಯನ್ನು ತೊರೆಯುವಂತೆ ಮಾಡಲು ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.