ಮೈಸೂರು: ಮುಡಾ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ನೌಕರನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಇ.ಡಿ (ED) ಅಧಿಕಾರಿಗಳು ಮುಡಾ ಹಗರಣದ ಕಿಂಗ್ಪಿನ್ ದ್ವಿತೀಯ ದರ್ಜೆ ಸಹಾಯಕ ಬಿ.ಕೆ.ಕುಮಾರ್ನನ್ನು ವಿಚಾರಣೆಗೆ ಒಳಪಡಿಸಿದ್ದರು. ಇ.ಡಿ ವಿಚಾರಣೆ ಬೆನ್ನಲ್ಲೇ ಕುಮಾರ್ನನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.
ಕುಮಾರ್ ಪಾಲಿಕೆ ನೌಕರನಾಗಿ ಕೆಲಸ ಆರಂಭಿಸಿದ್ದ. ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿದ್ದ. ಆದರೆ, ಈ ಆಸಾಮಿ ಮುಡಾದಲ್ಲಿ ಕೆಲಸ ಮಾಡುತ್ತಾ ಮಹಾನಗರ ಪಾಲಿಕೆಯಿಂದಲೂ ಸಂಬಳ ಪಡೆಯುತ್ತಿದ್ದ. ಎರಡೂ ಸರ್ಕಾರಿ ಕಚೇರಿಗಳಲ್ಲಿ ಏಕಕಾಲದಲ್ಲಿ ಕರ್ತವ್ಯ ನಿರ್ವಹಿಸಿ ಎರಡೆರಡು ವೇತನ ಪಡೆದು ಕಾನೂನು ಉಲ್ಲಂಘನೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾ ಮಾಡಲಾಗಿದೆ.
ನಾಲ್ಕು ದಿನಗಳ ಹಿಂದೆ ಬಿ.ಕೆ.ಕುಮಾರ್ಗೆ ಜಾರಿ ನಿರ್ದೇಶನಾಲಯ ಡ್ರಿಲ್ ಮಾಡಿತ್ತು. ಮುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ. ಹಿಂದಿನ ಕಮಿಷನರ್ಗಳಿಗೆ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ಹಾಗೂ ಮಂಜೂರಾತಿ ಮಾಡಲು ಅಗತ್ಯವಿದ್ದ ದಾಖಲೆಗಳನ್ನು ತಂದು ಕೊಡುತ್ತಿದ್ದ ಎಂದು ತಿಳಿದುಬಂದಿದೆ.
ಮುಡಾದಲ್ಲಿ ಸಂರಕ್ಷಿಸಿ ಇಡಲಾಗಿದ್ದ 8 ಸಾವಿರ ಸೈಟ್ಗಳ ಬಗ್ಗೆ ಅಧಿಕಾರಿ ಕುಮಾರ್ ಮಾಹಿತಿ ನೀಡಿದ್ದ. ಈ ಸೈಟ್ಗಳನ್ನು 50-50 ನಿಯಮದಲ್ಲಿ ಆಯುಕ್ತರು ಮಂಜೂರು ಮಾಡಿದ್ದರು. ಹಿಂದಿನ ಆಯುಕ್ತರಾದ ನಟೇಶ್ ಹಾಗೂ ದಿನೇಶ್ಕುಮಾರ್ಗೆ ಅಕ್ರಮದಲ್ಲಿ ಸಹಾಯ ಮಾಡಿದ ಆರೋಪ ಈ ಅಧಿಕಾರಿ ಮೇಲಿದೆ.