ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉಸ್ತಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದ್ದು, ಕೊಲೆ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಪೃಥ್ವಿರಾಜ್ ನಸ್ಕರ್ ಎಂಬ ಕಾರ್ಯಕರ್ತ ಪಕ್ಷದ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಶುಕ್ರವಾರ ರಾತ್ರಿ ಪಕ್ಷದ ಕಚೇರಿಯಲ್ಲಿ ನಸ್ಕರ್ ಅವರ ರಕ್ತಸಿಕ್ತ ಶವ ಪತ್ತೆಯಾಗಿತ್ತು. ನವೆಂಬರ್ 5 ರಿಂದ ಅವರು ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಕರ್ತನ ಕೊಲೆಗೆ ಸಂಬಂಧಿಸಿದಂತೆ ಬಿಜೆಪಿಯು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಕೈವಾಡವಿದೆ ಎಂದು ಆರೋಪಿಸಿದೆ. ಕೊಲೆ ಸಂಬಂಧ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಈ ಕೊಲೆ ವೈಯಕ್ತಿಕ ವಿಚಾರಕ್ಕೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಮಹಿಳೆ, ನಾಸ್ಕರ್ಗೆ ಹರಿತವಾದ ಆಯುಧಗಳಿಂದ ಹೊಡೆದು ಆತನನ್ನು ಹತ್ಯೆಗೈದಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಆಕೆಗೆ ಬೇರೆ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ, ಇತ್ತೀಚೆಗೆ ನಡೆದ ದುರ್ಗಾಪೂಜಾ ಹಬ್ಬದ ಸಂದರ್ಭದಲ್ಲಿ ಆರ್ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿರುದ್ಧದ ಪ್ರತಿಭಟನೆ ನಂತರ ಟಿಎಂಸಿ ಕಾರ್ಯಕರ್ತರು ಮತ್ತು ಪೊಲೀಸರ ಕೋಪಕ್ಕೆ ಆತ ಗುರಿಯಾಗಿದ್ದ ಎಂದು ನಸ್ಕರ್ ಅವರ ತಂದೆ ಆರೋಪಿಸಿದ್ದಾರೆ.