ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

public wpadmin

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ.

ಭಾನುವಾರ ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಶನಿವಾರ ಗಣ್ಯರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಹೀಗಾಗಿ ದೇವಾಲಯದ ಒಳ ಹೊರಗೆ ಭಕ್ತರ ಜಾತ್ರೆಯೇ ನೆರೆದಿತ್ತು. ಈ ಬಾರಿ ಜಾತ್ರಾ ಮಹೋತ್ಸವ ಇತಿಹಾಸ ನಿರ್ಮಿಸಿದ್ದು, ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದೆ.

ಹೌದು, ಹಾಸನಾಂಬೆ ದರ್ಶನೋತ್ಸವದ ತೆರೆಗೆ ಕೌಂಟ್‌ಡೌನ್ ಶುರುವಾಗಿದೆ. ನಿನ್ನೆ ವೀಕೆಂಡ್ ಜೊತೆಗೆ ಹಬ್ಬದ ರಜೆಯಿದ್ದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿ ದೇವತೆಯ ದರ್ಶನ ಪಡೆದು ಪುನೀತರಾದ್ರು. ಒಟ್ಟು ದಿನಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ.

1,000, 300 ರೂ. ವಿಶೇಷ ದರ್ಶನದ ಟಿಕೆಟ್‌ಗಳು, ಲಾಡು ಮಾರಾಟ ಹಾಗೂ ದೇವರ ಸೀರೆ ಮಾರಾಟದಿಂದ 8 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ಇತಿಹಾಸದಲ್ಲೇ ಈ ಬಾರಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯ ಭಕ್ತರಿಂದ ದೇವಿ ದರ್ಶನ ಹಾಗೂ ಅತಿ ಹೆಚ್ಚು ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.

ನಿನ್ನೆ ರಾತ್ರಿಯೇ ಸಿದ್ಧೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವ ಜರುಗಿತು. ಮುಂಜಾನೆವರೆಗೂ ಭಕ್ತರಿಗೆ ದೇವಿ ಹಾಸನಾಂಬೆ ದರ್ಶನ ದೊರಕಿತ್ತು. 6 ಗಂಟೆ ಬಳಿಕ ಸಾರ್ವಜನಿಕ ದರ್ಶನಕ್ಕೆ ತೆರೆ ಎಳೆಯಲಾಯ್ತು. ಮಧ್ಯಾಹ್ನ 12 ಗಂಟೆ ನಂತರ ವಿಶ್ವರೂಪ ದರ್ಶನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಚ್.ಪಿ ಸ್ವರೂಪ್‌ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ, ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಿದ್ದು, ಆ ಮೂಲಕ ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.

ಒಟ್ಟಿನಲ್ಲಿ ಅಕ್ಟೋಬರ್ 24 ರಿಂದ ಆರಂಭಗೊಂಡಿದ್ದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅದ್ದೂರಿ ಮತ್ತು ವಿಜೃಂಭಣೆಯಿಂದ ಜರುಗಿದ್ದು, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ. ಇವತ್ತು ಮಧ್ಯಾಹ್ನ 12 ಗಂಟೆ ನಂತರ ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

Share This Article
Leave a comment