ಹಾಂಕಾಂಗ್: ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಸಿಕ್ಸಸ್ ಕೂಟದ (Hong Kong Sixes 2024) ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರಾಬಿನ್ ಉತ್ತಪ್ಪ ಅವರ ಒಂದೇ ಓವರ್ನಲ್ಲಿ ರವಿ ಬೋಪಾರಾ ಅವರು 6 ಸಿಕ್ಸರ್ ಚಚ್ಚಿದ್ದಾರೆ.
ಇಂಗ್ಲೆಂಡ್ ಇನಿಂಗ್ಸ್ನ ನಾಲ್ಕನೇ ಓವರ್ ನಲ್ಲಿ ಬೋಪಾರಾ ಈ ವಿಶೇಷ ಸಾಧನೆಗೈದಿದ್ದಾರೆ. 3 ಓವರ್ಗಳಲ್ಲಿ ಇಂಗ್ಲೆಂಡ್ ಕೇವಲ 36 ರನ್ ಮಾಡಿತ್ತು. ಆದರೆ ನಾಲ್ಕನೇ ಓವರ್ ನಲ್ಲಿ ಬೋಪಾರಾ, ಉತ್ತಪ್ಪ ಓವರ್ ನಲ್ಲಿ ರನ್ ಮಳೆ ಸುರಿಸಿದರು. ಆ ಓವರ್ನ ಮೊದಲ ಐದು ಎಸೆತಗಳಲ್ಲಿ ಬೋಪಾರ ಐದು ಸಿಕ್ಸರ್ಗಳನ್ನು ಸಿಡಿಸಿದರು, ನಂತರ ಉತ್ತಪ್ಪ ವೈಡ್ ಎಸೆದರು. ಆದರೂ ಅವರು ಅಂತಿಮ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿ ಓವರ್ ನಲ್ಲಿ 37 ರನ್ ಕಲೆಹಾಕಿದರು.
ಈ ಮೂಲಕ, ಬೋಪಾರಾ ಹಾಂಕಾಂಗ್ ಸಿಕ್ಸ್ 2024 ರಲ್ಲಿ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ಭಾರತ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ.