ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ಗೆ ಬರೋಬ್ಬರಿ 5 ತಿಂಗಳ ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಮೊನ್ನೆಯಷ್ಟೇ ಮನೆಗೆ ಆಗಮಿಸಿದ್ದಾರೆ.
ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ಚಿಕಿತ್ಸೆಗಾಗಿ 6 ವಾರಗಳ ಅವಧಿಯ ಮಧ್ಯಂತರ ಜಾಮೀನನ್ನು ಕೋರ್ಟ್ ನೀಡಿದೆ. ಬುಧವಾರ ರಾತ್ರಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಿಂದ ನೇರವಾಗಿ ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ನಿವಾಸಕ್ಕೆ ತೆರಳಿದ್ದಾರೆ. ಪತ್ನಿ ಹಾಗೂ ಪುತ್ರನ ಜೊತೆ ದೀಪಾವಳಿ ಆಚರಿಸಿದ್ದಾರೆ.
ಜಾಮೀನಿನ ಮೇಲೆ ಹೊರಬಂದಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ರಾತ್ರಿ ಮನೆಗೆ ಬಂದ ದರ್ಶನ್ ಊಟ ಮಾಡಿದ ಬಳಿಕ ನಿದ್ದೆಗೆ ಜಾರಿದ್ದಾರೆ. ವಿಪರೀತ ಬೆನ್ನುನೋವು ಹಿನ್ನೆಲೆ ಬೆಳಗ್ಗೆ ಉಪಹಾರದ ಬಳಿಕವೂ ರೆಸ್ಟ್ ಮಾಡಿದ್ದಾರೆ. ಸದ್ಯ ಬೆನ್ನುನೋವು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರವಾದ ಇಂದು ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ದರ್ಶನ್ ಪುತ್ರ ವಿನೀಶ್ ನಿನ್ನೆ (ಅ.31) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ರಾತ್ರಿಯೇ ಮಗನ ಜೊತೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ದೀಪಾವಳಿ ಹಬ್ಬ ಒಂದು ಕಡೆಯಾದರೆ, ಮಗನ ಹುಟ್ಟುಹಬ್ಬ ಇನ್ನೊಂದು ಕಡೆ. ಹೀಗಾಗಿ ಕುಟುಂಬದೊಂದಿಗೆ ದರ್ಶನ್ ಹೆಚ್ಚು ಸಮಯ ಕಳೆದಿದ್ದಾರೆ.
ಮಧ್ಯಂತರ ಜಾಮೀನು ಆದೇಶ ಘೋಷಣೆಯಾದಾಗಿನಿಂದ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿಕೊಂಡಿದೆ. ಹೊಸಕೆರೆಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ಗೆ ದರ್ಶನ್ ಬಂದಿದ್ದಾರೆ ಎನ್ನುವ ವಿಚಾರ ತಿಳಿದ ಅಭಿಮಾನಿಗಳು ರಾತ್ರಿಯಿಂದಲೇ ಅಪಾರ್ಟ್ಮೆಂಟ್ ಬಳಿ ಜಮಾಯಿಸಿದರು. ದರ್ಶನ್ಗೆ ಜೈಕಾರ ಹಾಕಿ ಸಂಭ್ರಮಿಸಿದರು. ಅಪಾರ್ಟ್ಮೆಂಟ್ ನಿವಾಸಿಗಳಿಗೆ ತೊಂದರೆ ಆಗಬಾರದು, ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಇನ್ನೂ ಆರ್.ಆರ್.ನಗರ ದರ್ಶನ್ ನಿವಾಸ ಬಣಗುಟ್ಟುತ್ತಿದೆ. ಆ ನಿವಾಸದಲ್ಲಿದ್ದ ಐಷಾರಾಮಿ ಕಾರುಗಳನ್ನು ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್ಗೆ ಸಿಬ್ಬಂದಿ ಶಿಫ್ಟ್ ಮಾಡಿದ್ದಾರೆ. ಮಸ್ಟಾಂಗ್ ಕಾರು, ಲ್ಯಾಂಬರ್ಗಿನಿ ಮತ್ತು ಜಾಗ್ವಾರ್ನ್ನ ಸ್ವಚ್ಛಗೊಳಿಸಿ ಶಿಫ್ಟ್ ಮಾಡಿದ್ದಾರೆ. ದೀಪಾವಳಿ ಹಬ್ಬ ಪ್ರಯುಕ್ತ ಕಾರುಗಳಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.
ಒಟ್ಟಿನಲ್ಲಿ 6 ವಾರಗಳ ಕಾಲ ಹೊರಬಂದಿರುವ ದರ್ಶನ್ ಕುಟುಂದೊಂದಿಗೆ ವಿಶ್ರಾಂತಿ ಪಡೆದಿದ್ದಾರೆ. ಬೆನ್ನುನೋವು ಹಿನ್ನೆಲೆ ಇಂದು 10 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಲಿದ್ದು, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಬಹುತೇಕ ಅಪೋಲೋ ಅಥವಾ ಮಣಿಪಾಲ್ ಆಸ್ಪತ್ರೆ ದಾಖಲಾಗುವ ಸಾಧ್ಯತೆಯಿದ್ದು, ಈ ವಿಷಯವನ್ನು ಗೌಪ್ಯವಾಗಿಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ದರ್ಶನ್ ಆಸ್ಪತ್ರೆಗೆ ಹೋಗುವ ಹಿನ್ನೆಲೆ ಅಪಾರ್ಟ್ಮೆಂಟ್ ಬಳಿ ಅಭಿಮಾನಿಗಳು ಜಮಾಯಿಸುವ ಸಾಧ್ಯತೆಯಿದ್ದು, ಸದ್ಯ ಅಪಾರ್ಟ್ಮೆಂಟ್ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.