ಇಸ್ಲಮಾಬಾದ್: ಮತ್ತೊಂದು ಹೊಸ ಸಾಲ ಸಿಗದಿದ್ದರೆ ಸರಕಾರ ನಡೆಸಲಾಗದ ಸ್ಥಿತಿಯನ್ನು ಪಾಕಿಸ್ತಾನ ತಲುಪಿದೆ. ಹೀಗಾಗಿ ದೇಶದ ಆರ್ಥಿಕ ವೆಚ್ಚವನ್ನು ತಗ್ಗಿಸಲು ಸುಮಾರು ಒಂದೂವರೆ ಲಕ್ಷ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧಾರ ಮಾಡಿದೆ. ಅಲ್ಲದೆ, ಆರು ಸಚಿವಾಲಯಗಳನ್ನು ಸಹ ರದ್ದುಗೊಳಿಸಿ, ಇನ್ನೆರಡು ಸಚಿವಾಲಯಗಳ ವಿಲೀನ ಮಾಡುವ ನಿರ್ಧಾರವನ್ನು ಸಹ ಪಾಕ್ ಸರ್ಕಾರ ಘೋಷಣೆ ಮಾಡಿದೆ.
ಕೆಲವು ಖರ್ಚುಗಳನ್ನು ಕಡಿತಗೊಳಿಸಲು, ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸಲು, ಕೃಷಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕವಲ್ಲದ ವಲಯಗಳಿಗೆ ತೆರಿಗೆ ವಿಧಿಸಲು, ಸಬ್ಸಿಡಿಗಳನ್ನು ಮಿತಿಗೊಳಿಸಲು ಮತ್ತು ಕೆಲವು ಹಣಕಾಸಿನ ಜವಾಬ್ದಾರಿಗಳನ್ನು ಆಯಾ ಪ್ರಾಂತ್ಯಗಳಿಗೆ ವರ್ಗಾಯಿಸಲು ಪಾಕ್ ಸರ್ಕಾರ ಬದ್ಧವಾಗಿರುವುದಾಗಿ ಘೋಷಣೆ ಮಾಡಿದ ಬಳಿಕ ಆರ್ಥಿಕ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸೆ.26ರಂದು ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಮೊದಲ ಕಂತಿನಲ್ಲಿ 1 ಬಿಲಿಯನ್ ಡಾಲರ್ ಹಣವನ್ನು IMF ಬಿಡುಗಡೆ ಮಾಡಿದೆ.
ಈ ಕುರಿತು ಮಾತನಾಡಿದ ಪಾಕ್ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್, ಐಎಂಎಫ್ ಜತೆಗಿನ ಒಪ್ಪಂದ ಅಂತಿಮಗೊಳಿಸಲಾಗಿದೆ. ಇದರ ಅಂಗವಾಗಿ 6 ಸಚಿವಾಲಯಗಳನ್ನು ಮಚ್ಚಲಾಗುವುದು ಹಾಗೂ 2 ಸಚಿವಾಲಯಗಳನ್ನು ವಿಲೀನಗೊಳಿಸಲಾಗುವುದು. ಜತೆಗೆ ವಿವಿಧ ಸಚಿವಾಲಯಗಳಲ್ಲಿ 1,50,000 ಹುದ್ದೆಗಳನ್ನು ತೆಗೆದುಹಾಕಲಾಗುವುದು” ಎಂದರು.