ಈಗಾಗಲೇ ಕೆಲವು ಕಾರಣಗಳಿಂದ ಟೀಮ್ ಇಂಡಿಯಾದಲ್ಲಿ ಅವಕಾಶ ಕಳೆದುಕೊಂಡಿರುವ ಇಶಾನ್ ಕಿಶನ್ ಕಮ್ಬ್ಯಾಕ್ ಮಾಡುವುದಕ್ಕೆ ಹಾತೊರೆಯುತ್ತಿದ್ದಾರೆ. ಗಾಯದ ಕಾರಣದಿಂದ ಮೊದಲ ಸುತ್ತಿನ ದುಲೀಪ್ ಟ್ರೋಪಿಯಿಂದ ಹೊರಗುಳಿದಿದ್ದ ಕಿಶನ್, ಇಂದಿನಿಂದ ಆರಂಭವಾದ ದುಲೀಪ್ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಇಂಡಿಯಾ-ಸಿ ತಂಡದಲ್ಲಿ ಆಡುತ್ತಿದ್ದಾರೆ.
ಇಂಡಿಯಾ ಸಿ ಪರವಾಗಿ ಆಡುತ್ತಿರುವ ಇಶಾನ್ ಕಿಶನ್ ಕಮ್ಬ್ಯಾಕ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅನಂತಪುರಂನಲ್ಲಿ ನಡೆಯುತ್ತಿರುವ ಭಾರತ-ಬಿ ವಿರುದ್ಧದ ಪಂದ್ಯದಲ್ಲಿ ಇಶಾನ್ ಶತಕ ಸಾಧನೆ ಮಾಡಿದರು. ಇಶಾನ್ 120 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ ಕಿಶನ್ ಒಟ್ಟಾರೆ 126 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್‌ಗಳ ಸಹಿತ 111ರನ್ಗಳಿಸಿದ ವಿಕೆಟ್ ಒಪ್ಪಿಸಿದರು.
ಕಿಶನ್ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆ ಮೂಲಕ ಅನಂತಪುರ ಅಭಿಮಾನಿಗಳನ್ನ ರಂಜಿಸಿದರು. ಕೇವಲ 48 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದರು. ನಂತರ ಅದೇ ಆಟವನ್ನ ಮುಂದುವರಿಸಿದ ಜಾರ್ಖಂಡ್ ಪ್ಲೇಯರ್ ವೃತ್ತಿ ಜೀವನದ 7ನೇ ಶತಕ ಸಿಡಿಸಿದರು. ಇಂದ್ರಜಿತ್ ಜೊತೆಗೂಡಿ189ರನ್ಗಳ ಜೊತೆಯಾಟ ನೀಡಿದರು. ಬುಚ್ಚಿಬಾಬು ಟೂರ್ನಮೆಂಟ್ನಲ್ಲಿ ಜಾರ್ಖಂಡ್ ನಾಯಕನಾಗಿದ್ದ ಇಶಾನ್ ಕಿಶನ್ 107 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು. ಅಲ್ಲದೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಗಾಯಕ್ಕೊಳಗಾಗಿದ್ದ ಕಿಶನ್ ಕಮ್ಬ್ಯಾಕ್ ಪಂದ್ಯದಲ್ಲೇ ಅದ್ದೂರಿ ಪ್ರದರ್ಶನ ತೋರಿದ್ದಾರೆ. ಆದರೆ ಇಶಾನ್ ಸೂಪರ್ ಫಾರ್ಮ್‌ನಲ್ಲಿರುವುದು ಭಾರತದ ಆಯ್ಕೆದಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಭಾರತ ತಂಡದಲ್ಲಿ ಈಗಾಗಲೇ ರಿಷಬ್ ಪಂತ್, ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸರಣಿಗೆ ಭಾರತ ತಂಡದ ಆಯ್ಕೆ ಈಗಾಗಲೇ ಮುಗಿದಿದ್ದು, ಟೀಂ ಇಂಡಿಯಾದ ಕರೆಗಾಗಿ ಇಶಾನ್ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಿದೆ. ಫೆಬ್ರವರಿ 2024 ರಲ್ಲಿ, ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರು ದೇಶೀಯ ರೆಡ್-ಬಾಲ್ ಪಂದ್ಯಗಳನ್ನು ಆಡಲಿಲ್ಲ ಎಂಬ ಕಾರಣಕ್ಕೆ BCCI ಕೇಂದ್ರ ಗುತ್ತಿಗೆಯಿಂದ ವಜಾಗೊಳಿಸಿದೆ. ಆದರೂ ಕಿಶನ್ IPL 2024 ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ನೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು, ಆದರೆ ಒಂದೇ ಅರ್ಧಶತಕದೊಂದಿಗೆ 14 ಪಂದ್ಯಗಳಲ್ಲಿ 320 ರನ್ ಗಳಿಸಿದ್ದರು.
ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ ಭಾರತ-ಬಿ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ-ಸಿ ತಂಡ 79 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡಿದೆ. ಇಶಾನ್ ಕಿಶನ್ 111) ಮತ್ತು ಬಾಬಾ ಇಂದ್ರಜಿತ್ 78 ರನ್ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡರೆ ಸಾಯಿ ಸುದರ್ಶನ್ 43 ರನ್, ರಜತ್ ಪಾಟಿದಾರ್ 40 ರನ್ ಗಳಿಸಿದರು. ಭಾರತ-ಬಿ ಬೌಲರ್‌ಗಳ ಪೈಕಿ ಮುಖೇಶ್ ಕುಮಾರ್ ಮತ್ತು ನವದೀಪ್ ಸೈನಿ ತಲಾ ಒಂದು ವಿಕೆಟ್ ಪಡೆದರು.