ಬೆಂಗಳೂರು: ನೇಪಾಳ ಮೂಲದ ಮಹಾಲಕ್ಷ್ಮಿ ಎಂಬಾಕೆಯ ದೇಹ ತುಂಡು ತುಂಡು ಮಾಡಿ ಬರ್ಬರವಾಗಿ ಹತ್ಯ ಮಾಡಿದ್ದ ಘಟನೆ ಇದೇ ತಿಂಗಳ 21ರಂದು ವೈಯಾಲಿಕಾವಲ್ ನಲ್ಲಿ ನಡೆದಿತ್ತು.
ಇನ್ನು ಈ ಪ್ರಕರಣ ಕೈಗೆತ್ತಿಕೊಂಡ ವೈಯಾಲಿಕಾವಲ್ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ಆರಂಭಿಸಿದ್ದರು. ಆದರೆ ಆರೋಪಿಯ ಪತ್ತೆ ಮಾಡಲು ಹೊರ ರಾಜ್ಯಕ್ಕೆ ಹೋದ ಪೊಲೀಸರಿಗೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ. ಜೊತೆಗೆ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್ ನಲ್ಲಿ ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಹೌದು, ಆರೋಪಿ ಯಾವ ರೀತಿ ಕೊಲೆ ಮಾಡಿದ? ಏಕೆ ಕೊಲೆ ಮಾಡಿದ ಎಂಬ ವಿಚಾರಗಳ ಬಗ್ಗೆ ಮೃತ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ. ಆರೋಪಿ ರಂಜನ್ ಡೆತ್ ನೋಟ್ ಬರೆದಿಟ್ಟು ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡೆತ್ ನೋಟ್ ನಲ್ಲೇನಿದೆ?
ಸೆಪ್ಟಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಮಹಾಲಕ್ಷ್ಮೀ ಹತ್ಯೆ ಕುರಿತು ರಂಜನ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು, ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಕೊಲೆ ಮಾಡಲು ಕಾರಣವೇನೆಂಬುದನ್ನು ರಂಜನ್ ಬಹಿರಂಗಪಡಿಸಿದ್ದಾನೆ. ಸದ್ಯ ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಸಂಬಂಧ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.