ಇಂದು ಕೃಷಿಯಲ್ಲಿ ಹಲವಾರು ರೈತರು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಹಾಗೂ ನವೀಕೃತ ಕೃಷಿ ವಿಧಾನಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆದುಕೊಳ್ಳುತ್ತಿದ್ದಾರೆ. ಈ ಸಾಧಕ ರೈತರು ಕೃಷಿಯಿಂದ ಕೂಡ ಉತ್ತಮ ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶದ ರಾಮ್‌ಕರಣ್ ತಿವಾರಿ ಕೂಡ ಸೀಡ್ ಪ್ಲಾಟ್ ತಂತ್ರ ಮತ್ತು ಟಿಶ್ಯೂ ಕಲ್ಚರ್ ಬಳಸಿಕೊಂಡು ತಮ್ಮ 30 ಎಕರೆ ಜಮೀನಿನಲ್ಲಿ ಯಶಸ್ವಿಯಾಗಿ ಆಲೂಗಡ್ಡೆ ಕೃಷಿ ಬೆಳೆದು ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದ ಇಟಾವಾಗೆ ಸೇರಿದ ರಾಮ್‌ಕರಣ್ ಕೃಷಿ ಕುಟುಂಬದಿಂದ ಬಂದವರು. ಹೀಗಾಗಿ ಕೃಷಿಯಲ್ಲಿ ಅವರು ಉತ್ತಮ ಪರಿಣಿತಿ ಪಡೆದುಕೊಂಡಿದ್ದಾರೆ.
ಕೃಷಿಯನ್ನು ಸರಿಯಾದ ವಿಧಾನಗಳ ಮೂಲಕ ಮಾಡಿದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂಬುದನ್ನು ಅವರು ತೋರಿಸಿಕೊಡಬೇಕೆಂದು ಬಯಸಿದ್ದರು. ಕೃಷಿ ಎಂಬುದು ನನ್ನ ಜೀವನ ವಿಧಾನಕ್ಕಿಂತ ನನಗೆ ಹೆಚ್ಚು ಆಪ್ತವಾಗಿದೆ ಎಂದು ಹೇಳಿರುವ ರಾಮ್‌ಕರಣ್, ಕೃಷಿಯು ವ್ಯಾಪಾರ, ಹೆಮ್ಮೆ ಮತ್ತು ಸಮೃದ್ಧಿಯ ಮೂಲವಾಗಬಹುದು ಎಂದು ಹೇಳುತ್ತಾರೆ.
ರಾಮ್‌ಕರಣ್ ಕೂಡ ಇತರ ಕೃಷಿಕರಂತೆ ಕೃಷಿಯಲ್ಲಿ ಸಾಕಷ್ಟು ಏಳು ಬೀಳುಗಳು, ಸವಾಲುಗಳನ್ನು ಕಂಡಿದ್ದಾರೆ. ಅನಿಶ್ಚಿತ ಹವಾಮಾನ, ಏರಿಳಿತದ ಮಾರುಕಟ್ಟೆ ಬೆಲೆಗಳು ಹಾಗೂ ಮಾರುಕಟ್ಟೆ ಬೇಡಿಕೆಗಳನ್ನು ಪೂರೈಸಲು ಉತ್ಪಾದನೆಯ ಕೊರತೆಯನ್ನು ಅವರು ಎದುರಿಸಿದ್ದಾರೆ. ಅದಾಗ್ಯೂ ಹಠ ಬಿಡದೆ ರಾಮ್‌ಕರಣ್ ಏನಾದರೂ ಹೊಸತನವನ್ನು ಸಾಧಿಸಬೇಕೆಂದು ಬಯಸಿದ್ದರು. ಶಿಮ್ಲಾದ ಸೆಂಟ್ರಲ್ ಪೊಟಾಟೋ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ (ಸಿಪಿಆರ್‌ಐ) ತರಬೇತಿಯಲ್ಲಿ ಭಾಗವಹಿಸಿದಾಗ ರಾಮ್‌ಕರಣ್ ಜೀವನದಲ್ಲಿ ಹೊಸ ಬೆಳಕು ಮೂಡಿದಂತಾಯಿತು. ಉತ್ತರ ಪ್ರದೇಶದ ಕೃಷಿ ಇಲಾಖೆಯ ಈ ತರಬೇತಿ ಕಾರ್ಯಕ್ರಮ ಕೃಷಿಕರ ಜೀವನದಲ್ಲಿ ಮಹತ್ವದ ಟರ್ನಿಂಗ್ ಪಾಯಿಂಟ್ ಎಂದೆನಿಸಿತು.