ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಬಂಧನ ಆಗಿದೆ. ಈಗಾಗಲೇ ಅವರನ್ನು ಹೈದರಾಬಾದ್ ಗೆ ಕರೆತರಲಾಗಿದ್ದು, ವಿಚಾರಣೆ ನಡೆಯುತ್ತಿದೆ. ರಿಮಾಂಡ್ ರಿಪೋರ್ಟ್ ನಲ್ಲಿ ಜಾನಿ ಮಾಸ್ಟರ್ ತಪ್ಪೊಪ್ಪಿಕೊಂಡಿರುವುದಾಗಿ ಬರೆದಿದೆ.
ಇನ್ನು ಈ ರೀತಿಯ ಘಟನೆಗಳು ನಡೆದಾಗ ಯಾರೂ ಪತಿಯ ಪರ ವಹಿಸಿಕೊಂಡು ಬರಲ್ಲ. ಆದರೆ, ಈ ಪ್ರಕರಣದಲ್ಲಿ ಜಾನಿ ಮಾಸ್ಟರ್ ಪತ್ನಿ ಕೂಡ ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿದ್ದರು ಎನ್ನುವ ವಿಚಾರ ಗೊತ್ತಾಗಿದೆ. ಇನ್ನು ಯುವತಿಯನ್ನು ಆಯ್ಕೆ ಮಾಡಿಕೊಳ್ಳುವಾಗಲೇ ದುರುದ್ದೇಶ ಇತ್ತು ಎನ್ನಲಾಗಿದೆ.
ಹೌದು, ದುರುದ್ದೇಶದಿಂದಲೇ ಜಾನಿ ಮಾಸ್ಟರ್ ಸಂತ್ರಸ್ತೆಯನ್ನು ಸಹಾಯಕಿಯಾಗಿ ನೇಮಿಸಿಕೊಂಡಿದ್ದ ಎನ್ನಲಾಗುತ್ತಿದೆ. 2020 ರಲ್ಲಿ, ಕಾರ್ಯಕ್ರಮವೊಂದಕ್ಕೆ ಮುಂಬೈಗೆ ಹೋದಾಗ ಅಲ್ಲಿನ ಹೋಟೆಲ್ ಒಂದರಲ್ಲಿ ಜಾನಿ ತನ್ನ ಸಹಾಯಕಿ ಮೇಲೆ ಅತ್ಯಾಚಾರ ಎಸಗಿದ್ದು ಆ ಸಮಯದಲ್ಲಿ ಆಕೆಗೆ 16 ವರ್ಷ ವಯಸ್ಸಾಗಿತ್ತು ಎಂಬ ಸತ್ಯ ಬಹಿರಂಗವಾಗಿದೆ. ಅಲ್ಲಿಂದ ಈಚೆಗೆ ನಾಲ್ಕು ವರ್ಷಗಳಿಂದ ಜಾನಿ ಮಾಸ್ಟರ್, ಸಂತ್ರಸ್ತೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಒಂದು ವೇಳೆ ಈ ವಿಚಾರವನ್ನು ಎಲ್ಲಾದರೂ ಬಾಯಿ ಬಿಟ್ಟಲ್ಲಿ ಕರಿಯರ್ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಕೂಡಾ ಆ ಯುವತಿ ತಿಳಿಸಿದ್ದಾರೆಂದು ಪೊಲೀಸರು ರಿಮಾಂಡ್ ವರದಿಯಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಜಾನಿ ಪತ್ನಿ ಕೂಡಾ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.