ಬಾಗಲಕೋಟೆ: ಕೆಲವೇ ದಿನಗಳ ಹಿಂದೆ ಈರುಳ್ಳಿಗೆ ಒಳ್ಳೆಯ ಬೆಲೆಯಿತ್ತು. ಇನ್ನೇನು ಫಸಲನ್ನು ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಭೀಕರ ಮಳೆ ಸುರಿದು ಜಲಾವೃತವಾಗಿ ಬಾರಿ ಹಾನಿಯಾಗಿತ್ತು. ಈಗ ಮಳೆ ನಿಂತು ಅಳಿದುಳಿದ ಈರುಳ್ಳಿ ಮಾರಲು ಹೋದರೆ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರಿಂದ ರೈತರಿಗೆ ಈರುಳ್ಳಿ ಮತ್ತೆ ಕಣ್ಣೀರು ತರಿಸುವಂತಾಗಿದೆ.
ಹೌದು. ಬಾಗಲಕೋಟೆಯಲ್ಲಿ 38,000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಆದರೆ ಕಳೆದ ತಿಂಗಳು ಸುರಿದ ಭೀಕರ ಮಳೆಗೆ ಭಾರಿ ಹಾನಿಯಾಗಿದೆ. ಮಳೆಗೆ ಜಲಾವೃತವಾಗಿ ಹೊಲದಲ್ಲೇ ಈರುಳ್ಳಿ ತೇಲಾಡುವಂತಾಗಿತ್ತು ಕೊಳೆತು ಮಣ್ಣಲ್ಲಿ ಮಣ್ಣಾಗಿತ್ತು. ಇದೀಗ ಮಳೆ ನಿಂತಿದ್ದು ಅಳಿದುಳಿದ ಈರುಳ್ಳಿ ಮಾರುಕಟ್ಟೆಗೆ ಒಯ್ದರೆ ಬೆಲೆ ಪಾತಾಳಕ್ಕೆ ಕುಸಿದಿದೆ. ಕ್ವಿಂಟಲ್‌ಗೆ 400, 500 ರೂ. ಅಬ್ಬಾಬ್ಬಾ ಅಂದ್ರೆ 1,000 ರೂ.ಗೆ ಮಾರಾಟವಾಗುತ್ತಿದೆ. ಇದರಿಂದ ವಾಹನದ ಬಾಡಿಗೆಗೂ ಹಣ ಸಿಗುತ್ತಿಲ್ಲ ಎಂಬುದು ರೈತರ ಅಳಲು.
ಇನ್ನೂ ಜಿಲ್ಲೆಯಲ್ಲಿ 38,000 ಹೆಕ್ಟೇರ್ ಈರುಳ್ಳಿ ಬೆಳೆದಿದ್ದು, ಈಗಾಗಲೇ 10,000 ಹೆಕ್ಟೇರ್ ಈರುಳ್ಳಿ ಜಲಾವೃತವಾಗಿ ನಾಶವಾಗಿದೆ. ಇನ್ನು ಅದರಲ್ಲಿ ಕೆಲವೊಂದಿಷ್ಟು ಈರುಳ್ಳಿ ಮಣ್ಣಿನಲ್ಲಿ ಹೂತು ಹಾಳಾಗಿದೆ. ಜಲಾವೃತವಾದ ಹಿನ್ನೆಲೆ ಈರುಳ್ಳಿ ಗುಣಮಟ್ಟಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಜೊತೆಗೆ ರಾಜ್ಯಾದ್ಯಂತ ಈರುಳ್ಳಿ ಬೆಲೆ ಇಳಿಕೆಯಾಗಿದ್ದು, ರೈತರಿಗೆ ಹೊಡೆತ ಕೊಟ್ಟಿದೆ.
ರೈತರ ಬೆಳೆಹಾನಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ, ರೈತರಿಗೆ ಬಾರಿ ಪ್ರಮಾಣದಲ್ಲಿ ಈರುಳ್ಳಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ಕಾರದಿಂದ ಮುಂದಿನ ವಾರದಲ್ಲಿ ಬೆಳೆಹಾನಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.