ಸೆಪ್ಟೆಂಬರ್ 4ರಂದು ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದಂತೆ 3991 ಪುಟಗಳ ಗಾತ್ರ ನೋಡಿ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ‘ಅಷ್ಟೊಂದು ಸಾಕ್ಷಿಗಳಾ’ ಎಂದು ಹೌಹಾರಿದ್ದು ಸುದ್ದಿಯಾಗಿತ್ತು. ಇದೀಗ ದರ್ಶನ್ ಮತ್ತು ಪವಿತ್ರಾ ಗೌಡ ಮಧ್ಯೆ ಇರುವ ಸಂಬಂಧದ ಬಗ್ಗೆಯೂ ಚಾರ್ಜ್‌ಶೀಟ್ ಮಹತ್ವದ ಅಂಶವನ್ನು ಬಯಲು ಮಾಡಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ 4ರಂದು 24ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಈ ಒಂದು ಚಾರ್ಜ್ ಶೀಟ್ನಲ್ಲಿ ಇಡೀ ಪ್ರಕರಣದ ಪ್ರಮುಖ, ಹಾಗೂ ಚಿಕ್ಕ ಚಿಕ್ಕ ಮಾಹಿತಿಯನ್ನು ಕೂಡಾ ಇಲ್ಲಿ ದಾಖಲಿಸಲಾಗಿದೆ. ಇಂದು ಅಂದರೆ ಸೆಪ್ಟೆಂಬರ್ 9ರಂದು ಪೊಲೀಸರು ನ್ಯಾಯಾಲಯಕ್ಕೆ ಡಿಜಿಟಲ್ ಸಾಕ್ಷ್ಯಗಳನ್ನು ಸಲ್ಲಿಕೆ ಮಾಡಿದ್ದಾರೆ. ಒಟ್ಟು 60 ಎಲೆಕ್ಟ್ರಾನಿಕ್ ಸಾಕ್ಷ್ಯವನ್ನು ಬಾಕ್ಸ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಿಂದ ಶುರು ಮಾಡಿದಂತೆ, ಎಫ್ಎಸ್ಎಲ್ ರಿಪೋರ್ಟ್‌ಗಳು, ವೈದ್ಯಕೀಯ ವರದಿಗಳು, ಪಂಚನಾಮೆ ಪ್ರತಿಗಳು, ಮಹಜರು ಕಾಪಿಗಳು, ಆರೋಪಿಗಳ ಹೇಳಿಕೆ ಕಾಪಿಗಳು, ಸಾಕ್ಷಿಗಳ ಹೇಳಿಕೆ, ಕಸ್ಟಡಿ ವೇಳೆ ಆರೋಪಿಗಳ ವೈದ್ಯಕೀಯ ತಪಾಸಣೆ ಪ್ರತಿಗಳು, ಸಾಕ್ಷ್ಯಾಧಾರಗಳ ಪ್ರತಿಗಳು ಸೇರಿದಂತೆ ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡ 3991 ಪುಟಗಳುಳ್ಳ 9 ಸಂಪುಟಗಳ 10 ಕಡತಗಳನ್ನು ಒಳಗೊಂಡಿದೆ.
ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿರುವ ಮಾಹಿತಿ ಪ್ರಕಾರ, ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ನಟ ದರ್ಶನ್, ‘ಪವಿತ್ರಾ ಗೌಡ ನನ್ನೊಂದಿಗೆ ಕಳೆದ 10 ವರ್ಷಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಇವರು ಆರ್‌ಆರ್ ನಗರದಲ್ಲಿನ ನನ್ನ ಮೇಲಿನ ವಿಳಾಸದ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರಲ್ಲಿರುತ್ತಾರೆ’ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.