ಕಿರುತೆರೆ ನಟ ಹುಲಿ ಕಾರ್ತಿಕ್ ಮೇಲೆ FIR ದಾಖಲಾಗಿದೆ. ಜಾತಿ ನಿಂದನೆ ಮಾಡಿದ್ದಾನೆಂದು ಕೇಸ್ ದಾಖಲಾಗಿದೆ. ಸಮುದಾಯವೊಂದನ್ನ ಹಿಯಾಳಿಸುವ ರೀತಿಯಲ್ಲಿ ಮಾತನಾಡಿದ್ದ ಆರೋಪ ಅವರ ಮೇಲೆ ಕೇಳಿಬಂದಿದೆ.
ಹುಲಿ ಕಾರ್ತಿಕ್ ಕಿರುತೆರೆ ರಿಯಾಲಿಟಿ ಶೋನಲ್ಲಿ ಗೆದ್ದು ಹಿರಿ ತೆರೆಯಲ್ಲಿ ಮಿಂಚುತ್ತಿದ್ದಾರೆ. ಆದರೀಗ ಜಾತಿ ನಿಂದನೆ ಮಾಡಿದ್ದಾನೆಂದು ನಟನ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ.
‘ಯಾವುದೋ ರೋಡಲ್ಲಿ ಬಿದ್ದಿರುವ ವಡ್ಡನ ತರ ಇದ್ಯಾ’ ಎಂದು ಕಾರ್ಯಕ್ರಮದಲ್ಲಿ ಹುಲಿ ಕಾರ್ತಿಕ್ ಹೇಳಿದ್ದರು. ಖಾಸಗಿ ಚಾನಲ್ನ ಅವಾರ್ಡ್ ನೀಡುವ ಕಾರ್ಯಕ್ರಮದಲ್ಲಿ ಈ ಡೈಲಾಗ್ ಹೊಡೆದಿದ್ದರು. ಈ ಪದ ಬಳಕೆ ಬೋವಿ ಜನಾಂಗಕ್ಕೆ ನೋವುಂಟು ಮಾಡಿದೆ. ಹೀಗಾಗಿ ಜಾತಿಯನ್ನ ನಿಂದಿಸಿ ಮಾತನಾಡಿದ ನಟನ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ.
ಹುಲಿ ಕಾರ್ತಿಕ್ ಮಾತ್ರವಲ್ಲದೆ ಸಂಭಾಷಣೆಕಾರ, ಕಾರ್ಯಕ್ರಮದ ನಿರ್ಮಾಪಕ, ನಿರ್ದೇಶಕನ ಮೇಲೆ ಕೂಡ ಕೇಸ್ ದಾಖಲಾಗಿದೆ. ಮೊದಲನೇ ಆರೋಪಿಯಾಗಿ ಹುಲಿ ಕಾರ್ತಿಕ್ ಹೆಸರು ಉಲ್ಲೇಖಿಸಲಾಗಿದೆ. ಲೋಕೇಶ್ ಎಂಬುವವರು ದೂರು ನೀಡಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಂಗೇರಿ ಉಪವಿಭಾಗ ಎಸಿಪಿಯಿಂದ ವಿಚಾರಣೆಗೆ ಹಾಜರಾಗಲು ಕಾರ್ತಿಕ್ಗೆ ನೋಟಿಸ್ ನೀಡಲಾಗಿದೆ. ನಿರ್ದಿಷ್ಟ ಸಮುದಾಯದ ಹೆಸರನ್ನ ನೆಗೆಟೀವ್ ಆಗಿ ಬಳಸಿರುವ ಕಾರಣ ನಟನನ್ನು ಪೊಲೀಸರು ತನಿಖೆಗೆ ನಡೆಸಲು ಕರೆದಿದ್ದಾರೆ.