ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗ: ಜೋಶಿ ವಾಗ್ದಾಳಿ

public wpadmin

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆದು ಸಿಎಂ ಭಯೋತ್ಪಾದಕರ ಬೆಂಬಲಿಗರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದು ಕಾಂಗ್ರೆಸ್ ಸರ್ಕಾರ ಘನಘೋರ ಅಪರಾಧ ಮಾಡಿದೆ. ಕೇಸ್ ವಾಪಸ್ ಪಡೆದಿರುವುದನ್ನು ನಾವು ವಿರೋಧ ಮಾಡಿ ಮನವಿ ಸಲ್ಲಿಸಲು ಅವಕಾಶ ಕೇಳಿದ್ದೇವೆ. ಆದರೆ ನಮ್ಮ ಮನವಿಯನ್ನು ಸಿಎಂ ಸ್ವೀಕಾರ ಮಾಡುತ್ತಿಲ್ಲ. ಇದು ಮುಖ್ಯಮಂತ್ರಿಗಳ ದುರಹಂಕಾರ ತೋರಿಸುತ್ತದೆ. ಈ ಮೂಲಕ ಸಿದ್ದರಾಮಯ್ಯ ಭಯೋತ್ಪಾದಕರ ಬೆಂಬಲಿಗರು ಎಂಬತಾಗುತ್ತದೆ. ನಾವು ಮನವಿ ಕೊಡೋದು ತಪ್ಪಾ? ಇದು ಎಂತಹ ಅಪಹ್ಯಾಸ ಎಂದು ಕಿಡಿಕಾರಿದ್ದಾರೆ.

ನಾವು ಸಮಾಜ ವಿದ್ರೋಹಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮತಾಂಧರು ಪೊಲೀಸರ ಹತ್ಯೆ ಮಾಡಲು, ಠಾಣೆ ಸುಡಲು ಪ್ರಯತ್ನ ಮಾಡಿದ್ದರು. ಆದರೆ ಇಂದು ಕೇಸ್ ವಾಪಸ್ ಪಡೆದಿರುವುದು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಪೊಲೀಸರು ಇಂದು ಅನೇಕ ರೋಡ್ ಬಂದ್ ಮಾಡುತ್ತಿದ್ದಾರೆ. ಕ್ಷುಲ್ಲಕ, ವೋಟ್‌ಬ್ಯಾಂಕ್ ರಾಜಕೀಯಕ್ಕೆ ಮಿತಿ ಇರಬೇಕು. ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಯಾವಾಗಲೂ ಬೆಂಬಲ ನೀಡುತ್ತಿದೆ. ನಮ್ಮ ಮನವಿ ಸಿಎಂ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾವು ಹೋರಾಟ ಮಾಡುತ್ತೇವೆ. ಅವರು ಸ್ವೀಕಾರ ಮಾಡಿಲ್ಲ ಅಂದರೆ ನಾನು ನುಗ್ಗಿ ಮನವಿ ನೀಡುತ್ತೇವೆ ಎಂದಿದ್ದಾರೆ.

ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸು ಪಡೆದಿದ್ದು, ತಪ್ಪು ಎಂದು ಗೊತ್ತಾಗಿದೆ. ಅಧಿಕಾರ ಹೋಗುತ್ತದೆ ಎನ್ನುವ ಚಿಂತೆಯಲ್ಲಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ನಾನು ಸಾಕಷ್ಟು ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ನೋಡಿದ್ದೇನೆ. ಆದರೆ ಈ ಮಟ್ಟಕ್ಕೆ ಮಾನಸಿಕ ಸಮತೋಲನ ಕಳೆದುಕೊಳ್ಳುವ ಹಂತಕ್ಕೆ ಹೋಗಿರಲಿಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಇದು ಸಣ್ಣ ಆಲೋಚನೆಯಾಗಿದೆ. ಹಿಂದೂಪರ ಸಂಘಟನೆಗಳ ಕೇಸ್ ವಾಪಸ್ ಪಡೆದಿದ್ದಾರೆ ಎಂದಿದ್ದಾರೆ. ಆದರೆ ಭಜರಂಗದಳ, ವಿಶ್ವ ಹಿಂದೂ ಪರಿಷತ್ತು. ಲಷ್ಕರ್ ತೊಯ್ಬಾ ಜೊತೆಗೆ ಲಿಂಕ್ ಇಲ್ಲ. ಆದರೆ ಇಲ್ಲಿ ಕೆಲವರು ಲಿಂಕ್ ಇದ್ದಾರೆ ಎಂದರು.

Share This Article
Leave a comment