ಹಾಡು ಹಾಡಿ ಬೆಳಕು ಹಂಚುವ ಮಲೆನಾಡಿಗರ ವಿಶೇಷ ದೀಪಾವಳಿ!

public wpadmin

ಇಂದಿಗೂ ಜನಪದ ಸೊಗಡನ್ನು ತನ್ನೊಳಗೆ ಉಳಿಸಿಕೊಂಡ ಮಲೆನಾಡು, ವಿಶೇಷ ಕಲೆ ಸಂಪ್ರದಾಯಗಳಿಂದ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಅದೇ ರೀತಿ ದೀಪಾವಳಿ ಸಂದರ್ಭದಲ್ಲಿ ಮಲೆನಾಡಿನ ಜನ ಆಚರಿಸುವ ‘ಅಂಟಿಕೆ ಪಿಂಟಿಕೆ’ ಮನರಂಜನೆ ಜೊತೆಗೆ, ಬದುಕಿನ ಸಂದೇಶವನ್ನೂ ಸಾರುತ್ತದೆ.

ʻಅಂಟಿಕೆ ಪಿಂಟಿಕೆʼಇದು ಕೇವಲ ಒಂದು ಕಲೆ ಅಲ್ಲ. ಒಬ್ಬರಿಗೊಬ್ಬರು ಬೆಸೆದುಕೊಂಡಿರುವುದು, ಸಹಬಾಳ್ವೆ ಎಂದರ್ಥ. ಇದೇ ಸಂದೇಶವನ್ನೇ ಗ್ರಾಮದ ಊರು ಊರುಗಳಿಗೂ ದೀಪಾವಳಿ ಹಬ್ಬದ ರಾತ್ರಿಯಿಂದ ಮುಂಜಾನೆವರೆಗೂ ದೀಪ ಹಂಚುತ್ತ ಬದುಕಿನ ಅರ್ಥದ ಕತೆ, ಹಾಡುಗಳನ್ನು ಹಾಡುತ್ತ, ಮನಸ್ಸಿಗಂಟಿದ ಕತ್ತಲೆ ಕಳೆಯುವ ಆಚರಣೆ ಇದಾಗಿದೆ.

‘ಅಂಟಿಕೆ ಪಿಂಟಿಕೆ’ ಸಂಪ್ರದಾಯ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಇದಕ್ಕೆ ಅನೇಕ ವರ್ಷಗಳ ಹಿನ್ನೆಲೆ ಇದೆ. ಇತ್ತೀಚೆಗೆ ಈ ಕಲೆಯ ಬಗ್ಗೆ ಕೊಂಚ ಆಸಕ್ತಿ ಜನರಿಗೆ ಕಡಿಮೆ ಆಗುತ್ತಿದೆ. ಆದರೆ ಶಿವಮೊಗ್ಗದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಂಟಿಕೆ ಪಿಂಟಿಕೆ ಇಂದಿಗೂ ಆಚರಣೆಯಲ್ಲಿದೆ.

ದೀಪಾವಳಿಯ ಬಲಿಪಾಡ್ಯಮಿಯಿಂದ ಮೂರು ದಿನಗಳ ಕಾಲ ಅಹೋರಾತ್ರಿ ಮನೆ ಮನೆಗೆ ದೀಪದಿಂದ ದೀಪ ನೀಡುವ (ಅಂಟಿಸುವ) ಸಂಪ್ರದಾಯ ಉಳಿದುಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ಸೇರಿದಂತೆ ಕೆಲವು ತಾಲೂಕುಗಳ ಹಲವು ಊರುಗಳಲ್ಲಿ ಇದನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತದೆ.

ಒಂದು ಊರಿನಿಂದ ಮತ್ತೊಂದು ಊರಿಗೆ ದೀಪ ಬೆಳಗಿಸಲು ಹೋಗುವ ತಂಡಕ್ಕೆ ಅಂಟಿಕೆ ಪಿಂಟಿಕೆ ತಂಡ ಅಥವಾ ಹಬ್ಬ ಹಾಡುವವರ ತಂಡ ಎಂದು ಕರೆಯುವ ರೂಢಿ ಇದೆ. ಬಲಿಪಾಡ್ಯಮಿಯ ಸಂಜೆ ಈ ತಂಡ ಊರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ದೇವರ ಸಾನ್ನಿಧ್ಯದಲ್ಲಿ ಇರುವ ದೀಪದಿಂದ ಮತ್ತೊಂದು ದೀಪವನ್ನು ಹಚ್ಚಿ, ಅದನ್ನು ತೆಗೆದುಕೊಂಡು ಊರೂರು ಸುತ್ತಲು ತೆರಳುತ್ತಾರೆ. ಈ ತಂಡಗಳಲ್ಲಿ ಇಪ್ಪತ್ತರಿಂದ ಮೂವತ್ತು ಜನ ಇರುತ್ತಾರೆ.

ತಂಡದ ಸದಸ್ಯರೆಲ್ಲ ಜನ ನೀಡಿದ ಆಹಾರ ಪದಾರ್ಥಗಳು, ಅಕ್ಕಿ ಮತ್ತು ಎಣ್ಣೆಯನ್ನು ಹಣದ ರೂಪದಲ್ಲಿ ಪರಿವರ್ತಿಸಿ ಬಂದ ದುಡ್ಡನ್ನು ಊರಿನ ದೇವಸ್ಥಾನದ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ.

Share This Article
Leave a comment