ಹಲ್ಲುಗಳು ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರೆ ತಪ್ಪಾಗಲಾರದು. ಅನೇಕ ಬಾರಿ ಅಂದ ವರ್ಣಿಸುವಾಗ ದಾಳಿಂಬೆಯಂತೆ ಅಥವಾ ಮುತ್ತು ಜೋಡಿಸಿದಂತೆ ಹಲ್ಲುಗಳು ಹೊಂದಿದ್ದಾರೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಪ್ರತಿದಿನ ನಾವು ತಿನ್ನುವ ಆಹಾರದ ಕಣಗಳು ಹಲ್ಲುಗಳ ಮೇಲೆ ಸಂಗ್ರಹವಾಗುತ್ತವೆ. ಇದು ಹಳದಿ ಹಲ್ಲುಗಳಿಗೆ ದೊಡ್ಡ ಕಾರಣವಾಗಿದೆ. ಈ ಸಮಸ್ಯೆ ನಿವಾರಣೆಗೆ ಪ್ರತಿದಿನ ಹಲ್ಲುಜ್ಜಿದರೂ ಹಲ್ಲುಗಳಲ್ಲಿ ಹಳದಿ ಕಲೆಗಳು ಉಳಿದು ಬಿಡುತ್ತವೆ. ಕೆಲವೊಮ್ಮೆ ದಿನಕ್ಕೆರಡು ಬಾರಿ ಹಲ್ಲುಜ್ಜಿದರೂ ಹಲ್ಲುಗಳು ಕ್ಲೀನ್ ಆಗದೇ ಹಳದಿ ಬಣ್ಣದಿಂದಲೇ ಕೂಡಿರುತ್ತದೆ.
ಇದರಿಂದ ಸಾಕಷ್ಟು ಬಾರಿ ಅನೇಕ ಮಂದಿ ಮುಜುಗರಕ್ಕೊಳಗಾಗುತ್ತಾರೆ. ಕೆಲ ಮಂದಿ ಹಲ್ಲುಗಳನ್ನು ಬಿಳುಪಾಗಿಸಲು ಪಾಲಿಶ್ ಮಾಡಿಸುತ್ತಾರೆ. ವಾಸ್ತವವಾಗಿ ಹೀಗೆ ಮಾಡುವುದರಿಂದ ಹಲ್ಲುಗಳಿಗೆ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಆದರೆ ಹಲ್ಲಿನ ಮೇಲಿನ ಮೊಂಡುತನದ ಹಳದಿ ಕಲೆಗಳನ್ನು ತೊಡೆದುಹಾಕಲು ನಾವಿಂದು ತಿಳಿಸುತ್ತಿರುವ ಮನೆಮದ್ದುಗಳನ್ನು ಪ್ರಯತ್ನಿಸಿ. ಈ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಿರಿ.
ನಿಯಮಿತ ಧೂಮಪಾನ, ಚಹಾ ಮತ್ತು ಕಾಫಿ ಸೇವನೆಯ ಅಭ್ಯಾಸಗಳು ಹಾಗೂ ಆನುವಂಶಿಕ ಅಂಶಗಳು ಸಹ ಹಲ್ಲುಗಳು ಹಳದಿಯಾಗಲು ಕಾರಣವಾಗಬಹುದು. ಪ್ರತಿದಿನ ಹಲ್ಲುಜ್ಜುವುದರಿಂದರೂ ಈ ಸಮಸ್ಯೆಯು ಮುಂದುವರಿಯಬಹುದು. ಈ ಸಮಸ್ಯೆ ನಿವಾರಣೆಗೆ ಈ ಕೆಳಗೆ ಒಂದಷ್ಟು ಮನೆಮದ್ದುಗಳಿವೆ ನೋಡಿ.
ಎಣ್ಣೆ-ಉಪ್ಪು: ಒಂದು ಟೀಚಮಚ ಉಪ್ಪಿನೊಂದಿಗೆ ಕೆಲವು ಹನಿ ಎಣ್ಣೆಯನ್ನು ಮಿಶ್ರಣ ಮಾಡಿ ಮತ್ತು ಬ್ರಷ್ ಬಳಸಿ ಹಲ್ಲುಗಳ ಮೇಲೆ ಒಂದು ವಾರದವರೆಗೆ ಉಜ್ಜಿ. ಇದರಿಂದ ನೀವೇ ವ್ಯತ್ಯಾಸವನ್ನು ಕಾಣುವಿರಿ.
ಅಡುಗೆ ಸೋಡಾ: ನಿಮ್ಮ ಹಲ್ಲುಗಳನ್ನು ಹಲ್ಲುಜ್ಜುವಾಗ ಪೇಸ್ಟ್ ಮೇಲೆ ಸ್ವಲ್ಪ ಅಡುಗೆ ಸೋಡಾವನ್ನು ಸಿಂಪಡಿಸಿ. ಹೀಗೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡಿ. ಬೇಕಿಂಗ್ ಸೋಡಾ ಹಲ್ಲುಗಳಿಂದ ಹಳದಿ ಕಲೆಗಳನ್ನು ತೆಗೆದುಹಾಕುತ್ತದೆ.