ಸಿದ್ದು ಸರ್ಕಾರದ ವಿರುದ್ಧ ಮತ್ತೊಂದು ದೂರು ದಾಖಲು

public wpadmin

ಧಾರವಾಡ: ಈಗಾಗಲೇ ಮುಡಾ ಹಗರಣದಿಂದ ವಿಚಲಿತರಾಗಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಲೋಕಾಯುಕ್ತದಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿ ಧಾರವಾಡದ ಲೋಕಾಯುಕ್ತಕ್ಕೆ ಆರ್‌ಟಿಐ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದದ ಆರ್‌ಟಿಐ ಕಾರ್ಯಕರ್ತ ಮಾಬುಸಾಬ್ ಯರಗುಪ್ಪಿ ಎನ್ನುವವರು, ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನೇನೋ ಜಾರಿ ಮಾಡಿತು. ಆ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ದೊಡ್ಡ ದೊಡ್ಡ ಸಮಾವೇಶಗಳನ್ನು ರಾಜ್ಯ ಸರ್ಕಾರ ಮಾಡಿತು. ಆ ಸಮಾವೇಶಗಳು ಧಾರವಾಡ ಜಿಲ್ಲೆಯಲ್ಲೂ ನಡೆದಿದ್ದವು. ಆದರೆ, ಆ ಸಮಾವೇಶಗಳಲ್ಲಿ ಗೋಲ್ಮಾಲ್ ನಡೆದಿದ್ದು, ಅದರ ಸಂಪೂರ್ಣ ತನಿಖೆ ನಡೆಸುವಂತೆ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 5 ಗ್ಯಾರಂಟಿ ಸಮಾವೇಶಗಳು ನಡೆದಿದ್ದವು. ಒಂದು ಸಮಾವೇಶದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅವರೇ ಭಾಗಿಯಾಗಿದ್ದ ಸಮಾವೇಶದ ಲೆಕ್ಕಪತ್ರಗಳೇ ಏರುಪೇರಾಗಿವೆ ಎಂದು ನವಲಗುಂದದ ಆರ್‌ಟಿಐ ಕಾರ್ಯಕರ್ತ ಮಾಬುಸಾಬ್ ಅವರು ಪಡೆದ ಮಾಹಿತಿಯಲ್ಲಿ ಬಹಿರಂಗಗೊಂಡಿದೆ.

ನವಲಗುಂದದ ಸಮಾವೇಶ ಮುಗಿದ ಬಳಿಕ ಊಟದ ಕೊಟೇಶನ್ ಪಡೆಯಲಾಗಿದೆ. ಕೊಟೇಶನ್ ಸಲ್ಲಿಕೆಗೂ ಮುನ್ನವೇ ಊಟ, ಉಪಾಹಾರ ಪೂರೈಕೆ ಮಾಡಲಾಗಿದೆ. ಕುಂದಗೋಳ ಸಮಾವೇಶದಲ್ಲಿನ ಊಟ, ಉಪಾಹಾರದ ಕೊಟೇಶನ್‌ಗೆ ಸಹಿಯೇ ಇಲ್ಲ. ಆದರೂ ಏಜೆನ್ಸಿಯೊಂದಕ್ಕೆ ಊಟ, ಉಪಾಹಾರದ ಜವಾಬ್ದಾರಿಯನ್ನು ಜಿಲ್ಲಾಡಳಿತ ವಹಿಸಿಕೊಟ್ಟಿತ್ತು. ಈ ಸಮಾವೇಶಗಳ ಬಹುತೇಕ ಲೆಕ್ಕಪತ್ರಗಳು ಸರಿಯಾಗಿಲ್ಲ ಎಂದು ಆರೋಪಿಸಿರುವ ಆರ್‌ಟಿಐ ಕಾರ್ಯಕರ್ತ, ಗ್ಯಾರಂಟಿ ಸಮಾವೇಶದ ಕಾರ್ಯಕ್ರಮ ನಿರ್ವಹಣಾ ಸಮಿತಿ ವಿರುದ್ಧ ದೂರು ದಾಖಲಿಸಿದ್ದಾರೆ.

Share This Article
Leave a comment