ಬೆಳಗಾವಿ: ಸಿಎಂ ಸಿದ್ದರಾಮಯ್ಯ ಇಂದು (ಭಾನುವಾರ) ಶಕ್ತಿ ಪೀಠಗಳಲ್ಲಿ ಒಂದಾದ ಸವದತ್ತಿ ಯಲ್ಲಮ್ಮ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಯಲ್ಲಮ್ಮ ಗುಡ್ಡಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಾದ್ಯ ಮೇಳಗಳೊಂದಿಗೆ ಸ್ವಾಗತಿಸಲಾಯಿತು. ಮಂತ್ರ ಘೋಷಗಳೊಂದಿಗೆ ದೇವಿಯ ದರ್ಶನಕ್ಕೆ ಅರ್ಚಕರು ಆಹ್ವಾನಿಸಿದರು. ಇದೇ ವೇಳೆ ದೇವಸ್ಥಾನದ ಅರ್ಚಕ ಕೊಟ್ಟ ಎರಡು ನಿಂಬೆ ಹಣ್ಣುಗಳನ್ನು ಕೈಯಲ್ಲಿ ಹಿಡಿದುಕೊಂಡು ದೇವಸ್ಥಾನ ಪ್ರವೇಶಿಸಿದ ಸಿದ್ದರಾಮಯ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಪಾರ್ವತಿ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಅರ್ಚಕರು ಅವರ ಹೆಸರಲ್ಲಿ ಪೂಜೆ ಸಲ್ಲಿಸಿ, ತಿಲಕ ಇಟ್ಟು, ಮಂಗಳಾರತಿ ನೀಡಿ, ನಾಗಮೂರ್ತಿ ದೇವಿಯ ಬೆಳ್ಳಿ ಕಿರೀಟವನ್ನು ಸಿದ್ದರಾಮಯ್ಯ ಅವರ ತಲೆಗೆ ಮುಟ್ಟಿಸಿ ಆಶೀರ್ವಾದ ಮಾಡಿದರು. ದೇವಿಯ ಆರತಿ ಆಗುವವರೆಗೂ ದೇವಿ ಸನ್ನಿಧಾನದಲ್ಲಿ ನಿಂತು ದರ್ಶನ ಪಡೆದ ಸಿಎಂ, ತಾವೇ ಕುಂಕುಮ ಹಚ್ಚಿಕೊಂಡರು. ಬಳಿಕ 500 ರೂ. ಆರತಿ ತಟ್ಟೆಗೆ ಹಾಕಿದರು.