ಯಾದಗಿರಿ: ಸರ್ಕಾರಿ ಆಸ್ಪತ್ರೆ ವೈದ್ಯರ ಯಡವಟ್ಟಿಗೆ ಬಾಣಂತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರಿನ ತಾಲೂಕಾ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಭವಾನಿ ಎಂದು ಗುರುತಿಸಲಾಗಿದೆ.
ಕುಟುಂಬಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡ ಹೋಗಿದ್ದರು. ಆಸ್ಪತ್ರೆಯ ವೈದ್ಯೆ ಸರೋಜಾ ಪಾಟೀಲ ರಕ್ತ ತಪಾಸಣೆಗೆ ಕೊಟ್ಟಿದ್ದು, ವರದಿ ಬರುವ ಮುನ್ನವೇ ಸಿಜೆರಿಯನ್ ಮಾಡುವ ಮೂಲಕ ಹೆರಿಗೆ ಮಾಡಿದ್ದಾರೆ. ಬಳಿಕ ಬ್ಲಡ್ ರಿಪೋರ್ಟ್ ಬಂದಿದ್ದು, ಬಾಣಂತಿಗೆ ಕಾಮಾಲೆ ಇರುವುದು ಪತ್ತೆಯಾಗಿದೆ. ಇದರಿಂದ ಹೆರಿಗೆಯಾದ ಒಂದು ಗಂಟೆ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿ ಅಸ್ವಸ್ಥಳಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ
ಇದರಿಂದ ಬಾಣಂತಿಯನ್ನು ವೈದ್ಯೆ ತಕ್ಷಣ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದು, ಸ್ವತಃ ತಾನಾಗಿಯೇ ಹೋಗಿ ದಾಖಲಿಸಿದ್ದಾರೆ. ಆಗ ಯುನೈಟೆಡ್ ಆಸ್ಪತ್ರೆಯ ವೈದ್ಯರು ಆಪರೇಷನ್ ಪೇಲ್ ಆಗಿದೆ ಮತ್ತೊಮ್ಮೆ ಆಪರೇಷನ್ ಮಾಡಬೇಕೆಂದು ಸೂಚಿಸಿದ್ದಾರೆ. ಬಳಿಕ ಆಪರೇಷನ್ ಮುಗಿಯುವ ತನಕ ವೈದ್ಯೆ ಸರೋಜಾ ಪಾಟೀಲ ಅಲ್ಲಿಯೇ ಇದ್ದರು. ಆಪರೇಷನ್ ಬಳಿಕ 10 ಲಕ್ಷ ರೂ. ಬಿಲ್ ಮಾಡಿದ್ದಾರೆ.
10 ಲಕ್ಷ ರೂ. ಬಿಲ್ ಪಾವತಿಸಿದರೂ ಬಾಣಂತಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿಲ್ಲ. ಬಳಿಕ ಮಹಾರಾಷ್ಟ್ರದ ? ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ನಿನ್ನೆ (ಅ.13) ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ಶಹಾಪುರ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಮೃತಪಟ್ಟಿದ್ದಾಳೆ.
ಸದ್ಯ ಬಾಣಂತಿ ಕುಟುಂಬಸ್ಥರು ಶಹಾಪೂರ ಸರ್ಕಾರಿ ಆಸ್ಪತ್ರೆ ವೈದ್ಯೆ ಸರೋಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಕೂಡಲೇ ಸಸ್ಪೆಂಡ್ ಮಾಡಿ, ಆಸ್ಪತ್ರೆ ಬಿಲ್ ಪಾವತಿಸುವಂತೆ ಒತ್ತಾಯಿಸಿದ್ದಾರೆ.