ನಾವು ಎಷ್ಟೇ ಬ್ಯುಸಿಯಾಗಿದ್ದರೂ ನಮ್ಮ ಪ್ರೀತಿಪಾತ್ರರು ಹಾಗೂ ಆತ್ಮೀಯರಿಗೆ ಸಮಯ ನೀಡಬೇಕಾಗುತ್ತದೆ. ಇದು ಸಂಬಂಧವನ್ನು ಬಲಪಡಿಸಲು ಸಹಾಯಕವಾಗಿದೆ. ಸಂಬಂಧದಲ್ಲಿ ಸಾವಧಾನತೆಯನ್ನು ಅನುಸರಿಸುವುದು ಎಂದರೆ ಆಪ್ತತೆಯನ್ನು ಸಾಧಿಸುವುದು ಸಂಬಂಧವನ್ನು ಅನ್ಯೋನ್ಯಗೊಳಿಸುತ್ತದೆ ಹಾಗೂ ಬಲಪಡಿಸುತ್ತದೆ. ಸಂಬಂಧದಲ್ಲಿ ಸಾವಧಾನತೆಯನ್ನು ಅಭ್ಯಸಿಸುವುದು ಎಂದರೆ ನಿಮ್ಮ ಸಂಗಾತಿಗಳ (Partner) ಬೇಕು ಬೇಡಗಳಿಗೆ ಮಹತ್ವ ನೀಡುವುದು, ಅವರೊಂದಿಗೆ ಸಮಯ ಕಳೆಯುವುದು, ಸಂವಹನ ನಡೆಸುವುದು, ಅವರ ಮನದಾಳದ ಮಾತುಗಳನ್ನು ಆಲಿಸುವುದು ಮೊದಲಾದ ಕ್ರಿಯೆಗಳಾಗಿವೆ.
ನಾವು ಎಷ್ಟೋ ಬಾರಿ ನಮ್ಮ ಕೆಲಸಗಳಲ್ಲಿ ಎಷ್ಟು ಮುಳುಗಿರುತ್ತೇವೆ ಎಂದರೆ ನಮ್ಮ ಪ್ರೀತಿಪಾತ್ರರಿಗೆ ಕುಟುಂಬದವರಿಗೆ ಸಮಯ ಕೊಡಲೂ ಆಗುವುದಿಲ್ಲ. ಅವರ ಮಾತುಗಳನ್ನು ಆಲಿಸಲು ಅವರೊಂದಿಗೆ ಸುತ್ತಾಡಲು ಸಮಯ ನಿಗದಿಪಡಿಸುವುದಿಲ್ಲ. ಇದು ಸಂಬಂಧವನ್ನು ಅಲುಗಾಡಿಸಿ ಬಿಡುತ್ತದೆ. ಮೇಲ್ನೋಟಕ್ಕೆ ಇದು ಸಣ್ಣ ವಿಚಾರವಾಗಿದ್ದರೂ ನಿಧಾನಕ್ಕೆ ಇದು ಸಂಬಂಧಗಳಲ್ಲಿ ಅಪಸ್ವರವನ್ನುಂಟು ಮಾಡುತ್ತದೆ.
ಸಕ್ರಿಯ ಆಲಿಸುವಿಕೆ ಎಂದರೆ ನಿಮ್ಮ ಸಂಗಾತಿ ಏನು ಹೇಳುತ್ತಾರೆ ಹಾಗೂ ಅವರ ಮನದಾಳದಲ್ಲಿ ಏನಿದೆ ಎಂಬುದನ್ನು ಆಲಿಸುವುದಾಗಿದೆ. ಅವರು ಮಾತನಾಡುವಾಗ ಅವರತ್ತ ಗಮನ ಹರಿಸಿ. ಅವರು ಮಾತನಾಡುವುದು ನೀವೇನೋ ಕೆಲಸ ಮಾಡುವುದು ಮಾಡುತ್ತಿದ್ದರೆ ಇದು ಅವರಿಗೆ ಬೇಸರವನ್ನುಂಟು ಮಾಡಬಹುದು ಹಾಗೂ ನೀವು ನಿರ್ಲಕ್ಷಿಸುತ್ತಿದ್ದೀರಿ ಎಂಬುದಾಗಿ ತಿಳಿಯುತ್ತದೆ.
ಸಂಗಾತಿಯ ಮಾತುಗಳನ್ನು ಆಲಿಸುವುದು ಅವರಿಗೆ ಮಾನಸಿಕವಾಗಿ ಭಾವನಾತ್ಮಕವಾಗಿ ಬೆಂಬಲ ನೀಡಿದಂತಾಗುತ್ತದೆ. ನೀವು ಅವರಿಗೆ ಮಹತ್ವ ಹಾಗೂ ಬೆಲೆ ನೀಡುತ್ತಿದ್ದೀರಿ ಎಂಬುದರ ಅರಿವಾಗುತ್ತದೆ. ಅವರನ್ನು ನೀವು ಇನ್ನಷ್ಟು ಅರಿತುಕೊಳ್ಳುತ್ತಿದ್ದೀರಿ ಎಂಬ ಭಾವನೆಯನ್ನುಂಟು ಮಾಡುತ್ತದೆ. ನಿಮ್ಮ ಸಂಗಾತಿಯ ಮಾತುಗಳನ್ನು ಕೇಳುವುದು ಅವರಿಗೆ ನೀವು ಬೆಲೆ ನೀಡುತ್ತಿದ್ದೀರಿ, ಅವರ ಮಾತುಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದೀರಿ ಎಂಬ ಭಾವನೆಯನ್ನುಂಟು ಮಾಡುತ್ತದೆ. ಮುಂದೆನಾಗುವುದೋ ಅಥವಾ ಈ ಹಿಂದೆ ಏನಾಗಿದೆಯೋ ಎಂಬುದನ್ನು ಯೋಚಿಸುತ್ತಾ ಕೂರದಿರಿ ಬದಲಿಗೆ ಪ್ರಸ್ತುತ ಜೀವನವನ್ನು ಆಸ್ವಾದಿಸಿ. ನಿಮ್ಮ ಆಪ್ತರೊಂದಿಗೆ ಸಮಯ ಕಳೆಯುವಾಗ ಫೋನ್ ಅನ್ನು ಆದಷ್ಟು ಪಕ್ಕಕ್ಕಿಡಿ. ಪ್ರಸ್ತುತ ಏನು ಮಾತನಾಡುತ್ತಿದ್ದೀರಿ ಎಂಬುದರ ಮೇಲೆ ದೃಷ್ಟಿ ಹರಿಸಿ. ಈ ಸಾವಧಾನತೆಯು ಬಲವಾದ, ಹೆಚ್ಚು ನಿಜವಾದ ಸಂಪರ್ಕಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸಂವಹನಗಳನ್ನು ಹೆಚ್ಚು ಅರ್ಥಪೂರ್ಣವಾಗಿಸುತ್ತದೆ.
ಪರಾನುಭೂತಿಯು ಇನ್ನೊಬ್ಬ ವ್ಯಕ್ತಿಯ ಭಾವನೆಗಳನ್ನು ಗುರುತಿಸುವುದು ಮತ್ತು ಹಂಚಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಅಥವಾ ಸಂಘರ್ಷಗಳನ್ನು ಪರಿಹರಿಸುವಾಗ, ಅವರ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ವೀಕ್ಷಿಸಲು ಶ್ರಮಿಸಿ. ಅವರ ಭಾವನೆಗಳನ್ನು ಅಂಗೀಕರಿಸಿ ಮತ್ತು ನಿಮ್ಮ ತಿಳುವಳಿಕೆಯನ್ನು ವ್ಯಕ್ತಪಡಿಸಿ. ಈ ಪರಾನುಭೂತಿಯ ವಿಧಾನವು ಬೆಂಬಲ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಭಾವನಾತ್ಮಕ ಬಂಧಗಳನ್ನು ಗಾಢಗೊಳಿಸುತ್ತದೆ.