ಬೆಂಗಳೂರು/ ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಸುತ್ತಿಕೊಂಡಿರುವ ಮುಡಾ ನಿವೇಶನ ಹಂಚಿಕೆ ಉರುಳು ಇದೀಗ ಮತ್ತಷ್ಟು ಬಿಗಿಯಾಗಿದೆ.
ಎಫ್‌ಐಆರ್ ದಾಖಲಿಸಿ ಮೂರು ತಿಂಗಳಲ್ಲಿ ತನಿಖಾ ವರದಿ ನೀಡುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಆದೇಶ ನೀಡಿದ ಬೆನ್ನಲ್ಲೇ ಇಂದು ಮೈಸೂರು ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಲಿದೆ.
ಭ್ರಷ್ಟಾಚಾರ ತಡೆ ಕಾಯ್ದೆ 1988 ಕಾಯ್ದೆಯಡಿ ಪ್ರಕರಣಗಳು ದಾಖಲು ಮಾಡುವ ಸಾಧ್ಯತೆ. ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ, ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ, ಸೆಕ್ಷನ್ 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ ಮಾಡುವುದು, ಸೆಕ್ಷನ್ 403 ಆಸ್ತಿಯ ದುರ್ಬಳಕೆ, ಸೆಕ್ಷನ್ 406 ನಂಬಿಕೆಯ ಉಲ್ಲಂಘನೆ, ಸೆಕ್ಷನ್ 420 ವಂಚನೆ, ಸೆಕ್ಷನ್ 426 ದುಷ್ಕೃತ್ಯವೆಸಗುವುದು, ಸೆಕ್ಷನ್ 465 ಪೋರ್ಜರಿ, ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಪೋರ್ಜರಿ, ಸೆಕ್ಷನ್ 340 ಅಕ್ರಮ ಬಂಧನ, ಸೆಕ್ಷನ್ 351 ಇತರರಿಗೆ ಹಾನಿಯನ್ನುಂಟು ಮಾಡುವುದು ಸೇರಿದಂತೆ ಹಲವು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ.
ಈ ಮಧ್ಯೆ, ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ನೀಡಿರುವ ದೂರಿಗೆ ಎಫ್‌ಐಆರ್ ದಾಖಲಿಸಬೇಕು ಅಥವಾ ಹಿಂಬರಹ ನೀಡಬೇಕೆಂದು ಜೆಡಿಎಸ್ ವಕ್ತಾರ ಎಸ್.ಪಿ.ಪ್ರದೀಪ್ ಕುಮಾರ್ ನೇತೃತ್ವದ ನಿಯೋಗ ಬುಧವಾರ ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ವಕೀಲ ಪ್ರದೀಪ್ ಕುಮಾರ್, ಹೈಕೋರ್ಟ್ ಆದೇಶ ಪ್ರತಿಯೊಂದಿಗೆ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿದರು. ಈ ಹಿಂದೆ ಇದೇ ವಿಚಾರವಾಗಿ ನೀಡಿದ್ದ ಎರಡು ದೂರಿನ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಹಿಂಬರಹ ನೀಡಿ ಎಂದು ಪಟ್ಟುಹಿಡಿದರು.
ಮುಖ್ಯಮಂತ್ರಿ ವಿರುದ್ದ ನಾವು ನೀಡಿರುವ ದೂರಿಗೆ ಎಫ್‌ಐಆರ್ ದಾಖಲಿಸಬೇಕು. ಅಥವಾ ಹಿಂಬರಹ ನೀಡಬೇಕು. ಇಲ್ಲದಿದ್ದರೆ ಕಚೇರಿ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದರು. ಇದರಿಂದ ಕಚೇರಿಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಈ ನಡುವೆ, ಕಾನೂನು ಹೋರಾಟದಲ್ಲಿ ಸಿಎಂಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಕಾನೂನು ತಜ್ಞರ ತಂಡವನ್ನು ಬದಲಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.