ಪ್ರತಿ ಮಹಿಳೆಗೂ ಮುಟ್ಟಿನ ನೋವು ವಿಭಿನ್ನವಾಗಿರುತ್ತದೆ. ಕೆಲವರು ಈ ನೋವಿನಿಂದ ದುರ್ಬಲರಾಗುತ್ತಾರೆ. ಕೆಲವರಿಗೆ ಸಾಮಾನ್ಯವಾಗಿರುತ್ತದೆ. ಇನ್ನೂ ಕೆಲವರು ಜ್ವರ, ವಾಕರಿಕೆ ಮತ್ತು ತೀವ್ರ ತಲೆನೋವಿನಂತಹ ರೋಗಲಕ್ಷಣಗಳನ್ನು ತಮ್ಮ ಮುಟ್ಟಿನ ಸಮಯ ಸಮೀಪಿಸುವ ಮುನ್ನ ಅನುಭವಿಸಬಹುದು. ಇದನ್ನು ‘ಪಿರಿಯಡ್ ಫ್ಲೂ’ ಎಂದು ಕರೆಯಲಾಗುತ್ತದೆ. ಮುಟ್ಟು ಮಹಿಳೆಯರ ಜೀವನದ ಒಂದು ಪ್ರಮುಖ ಭಾಗವಾಗಿದೆ. ಇದು ಆರೋಗ್ಯದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮಹಿಳೆಯರು ಋತು ಚಕ್ರದ ಸಮಯದಲ್ಲಿ ಹೊಟ್ಟೆ ನೋವು ಮತ್ತು ಅಸ್ವಸ್ಥತೆಯಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ ಎಲ್ಲಾ ಮಹಿಳೆಯರಿಗೂ ಮುಟ್ಟಿನ ಸೆಳೆತ ಬರುವುದಿಲ್ಲವಾದರೂ, ಕೆಲವರು ಇಂತಹ ನೋವಿನಿಂದ ತೀವ್ರವಾಗಿ ಬಳಲುತ್ತಿರುತ್ತರೆ.
ಮುಟ್ಟಿನ ಜ್ವರ ಎಂದರೇನು?
ಈ ಬಗ್ಗೆ ಪ್ರಸೂತಿ ತಜ್ಞ ಡಾ. ನಂದಿತಾ ಪಾಲಶೆಟ್ಕರ್ ಮಾತನಾಡಿ, ಮಹಿಳೆಯರ ದೇಹದಲ್ಲಿನ ಹಾರ್ಮೋನ್ ಬದಲಾವಣೆಯೇ ಪಿರಿಯಡ್ ಫೀವರ್ಗೆ ಕಾರಣ. ಇವುಗಳು ಸಾಮಾನ್ಯವಾಗಿ ಋತುಚಕ್ರದ ಕೊನೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣಗಳ ತೀವ್ರತೆ ಮತ್ತು ಅವಧಿಯು ಬದಲಾಗಬಹುದು. ಏಕೆಂದರೆ ಈ ಜ್ವರಗಳು ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುತ್ತವೆ.
ಕೆಲ ಮಹಿಳೆಯರು ಜ್ವರ, ಆಯಾಸ, ಆಲಸ್ಯ, ತಲೆನೋವು, ಸ್ನಾಯು ಸೆಳೆತ, ಹೊಟ್ಟೆ ಸೆಳೆತ, ವಾಕರಿಕೆ, ವಾಂತಿ, ಆಲಸ್ಯ, ಮಲಬದ್ಧತೆಯಂತಹ ಸಮಸ್ಯೆಗಳನ್ನು ಮುಟ್ಟಿಗೂ ಮುನ್ನ ಅಥವಾ ಮುಟ್ಟಿನ ಸಮಯದಲ್ಲಿ ಅನುಭವಿಸುತ್ತಾರೆ. ಮುಟ್ಟಿನ ಸಮಯದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ಬದಲಾಗಬಹುದು ಮತ್ತು ಇದರ ಪರಿಣಾಮದಿಂದ ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಕಡಿಮೆ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಜ್ವರ ತರಹದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.
ಮುಟ್ಟಿನ ಜ್ವರದ ಲಕ್ಷಣಗಳು
- ಆಯಾಸ ಮತ್ತು ದೌರ್ಬಲ್ಯ: ಆಯಾಸ ಮತ್ತು ದೌರ್ಬಲ್ಯವು ಮುಟ್ಟಿನ ಸೆಳೆತದ ಸಾಮಾನ್ಯ ಲಕ್ಷಣಗಳಾಗಿವೆ. ಈ ಕಾರಣದಿಂದಾಗಿ ಮಹಿಳೆಯರು ತುಂಬಾ ದಣಿಯುತ್ತಾರೆ ಮತ್ತು ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಕಷ್ಟಪಡುತ್ತಾರೆ.
- ಸ್ನಾಯು ಮತ್ತು ಕೀಲು ನೋವುಗಳು: ಜ್ವರದ ಸಮಯದಲ್ಲಿ ಅನುಭವಿಸುವಂತೆಯೇ ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲೂ ಸ್ನಾಯು ಅಥವಾ ಕೀಲು ನೋವಿನಿಂದ ಬಳಲುತ್ತಿರುತ್ತಾರೆ.
- ತಲೆನೋವು ಮತ್ತು ಮೈಗ್ರೇನ್: ಮಹಿಳೆಯರು ಮುಟ್ಟಿಗೂ ಮುನ್ನ ಅಥವಾ ಮುಟ್ಟಿನ ಸಮಯದಲ್ಲಿ ತಲೆನೋವು ಅಥವಾ ಮೈಗ್ರೇನ್ ಅನ್ನು ಅನುಭವಿಸುತ್ತಾರೆ. ಇವುಗಳು ಸೌಮ್ಯದಿಂದ ತೀವ್ರತರದವರೆಗೆ ಇರಬಹುದು ಮತ್ತು ವ್ಯಕ್ತಿಯ ದೈನಂದಿನ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಬಹುದು.
- ಜ್ವರದ ಭಾವನೆ: ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ಶೀತ, ಬಿಸಿ ಜ್ವರ, ಹೆಚ್ಚಿದ ದೇಹದ ಉಷ್ಣತೆ ಇತ್ಯಾದಿಗಳೊಂದಿಗೆ ಜ್ವರವನ್ನು ಹೊಂದಿರುವ ಭಾವನೆಯನ್ನು ವರದಿ ಮಾಡುತ್ತಾರೆ. ಹಾರ್ಮೋನಿನ ಏರಿಳಿತದಿಂದ ಇವು ಸಂಭವಿಸಬಹುದು.
- ವಾಕರಿಕೆ ಮತ್ತು ಜೀರ್ಣಕಾರಿ ಸಮಸ್ಯೆಗಳು: ವಾಕರಿಕೆ, ಉಬ್ಬುವುದು, ಅತಿಸಾರ ಮತ್ತು ಇತರ ಜೀರ್ಣಕಾರಿ ಅಡಚಣೆಗಳು ಋತುಚಕ್ರದ ಸಮಯದಲ್ಲಿ ಸಂಭವಿಸುತ್ತವೆ ಮತ್ತು ಗ್ಯಾಸ್ಟ್ರೋಎಂಟರೈಟಿಸ್ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂದು ಡಾ ನಂದಿತಾ ಬಾಲ್ಶೆಟ್ಕರ್ ವಿವರಿಸುತ್ತಾರೆ.
- ಗಂಟಲು ನೋವು: ಮುಟ್ಟಿನ ಸಮಯದಲ್ಲಿ ಕಾಡುವ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ ಗಂಟಲು ನೋವು. ಇದರಿಂದ ನುಂಗಲು ಕಷ್ಟವಾಗುತ್ತದೆ. ಅಲ್ಲದೇ, ಸೋಂಕುಗಳು ಮತ್ತು ಉರಿಯೂತ ಕೂಡ ಉಂಟಾಗಬಹುದು.
- ಮೂಡ್ ಸ್ವಿಂಗ್ಸ್: ಮುಟ್ಟಿನ ಜ್ವರದ ಸಮಯದಲ್ಲಿ ದೈಹಿಕ ಅಸ್ವಸ್ಥತೆಗಳು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಮೂಡ್ ಸ್ವಿಂಗ್, ಕಿರಿಕಿರಿ, ಖಿನ್ನತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.