ವಾಷಿಂಗ್ಟನ್/ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್ (Space X) ಕಂಪನಿಯ ರಾಕೆಟ್ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ.
ಇಸ್ರೋದ ಜಿಸ್ಯಾಟ್ -20 ಸಂವಹನ ಉಪಗ್ರಹವನ್ನು ಹೊತ್ತುಕೊಂಡಿದ್ದ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ಭಾರತೀಯ ಕಾಲಮಾನ ಸೋಮವಾರ ರಾತ್ರಿ 23:45ಕ್ಕೆ ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿತು. ಉಡಾವಣೆಗೊಂಡ 34 ನಿಮಿಷದಲ್ಲಿ ರಾಕೆಟ್ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.
ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್, ಜಿಸ್ಯಾಟ್-20 ಮಿಷನ್ ಅವಧಿ 14 ವರ್ಷ. ಅತ್ಯಂತ ಯಶಸ್ವಿಯಾಗಿ ಉಡಾವಣೆಯಾಗಿದೆ ಯಾಕೆಂದರೆ ನಾವು ಉತ್ತಮ ಕಕ್ಷೆಯನ್ನು ಪಡೆದುಕೊಂಡಿದ್ದೇವೆ. ಉಪಗ್ರಹವು ಆರೋಗ್ಯಕರವಾಗಿದ್ದು ಸೌರ ಫಲಕಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
https://twitter.com/i/status/1858578906758226102
ಇಸ್ರೋ ಮತ್ತು ಸ್ಪೇಸ್‌ಎಕ್ಸ್ ನಡುವಿನ ಅನೇಕ ವಾಣಿಜ್ಯ ಸಹಯೋಗಗಳಲ್ಲಿ ಇದು ಮೊದಲನೆಯದು ಮತ್ತು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ (Donald Trump) ಅವಧಿಯಲ್ಲಿ ಅವರ ಸ್ನೇಹಿತ ಮಸ್ಕ್ ಜೊತೆಗಿನ ಮೊದಲ ಒಪ್ಪಂದ ಎನ್ನುವುದು ವಿಶೇಷ.