ಮದುವೆ ಎಂಬುದು ಒಂದು ಪವಿತ್ರ ಬಂಧ. ಇದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಗಂಡು-ಹೆಣ್ಣು ಸೇರುವ ಅದ್ಭುತ ಸಮಯವಿದು. ಸಾವಿರ ಸುಳ್ಳು ಹೇಳಿಯಾದ್ರೂ ಒಂದು ಮದುವೆ ಮಾಡಿ ಅಂತ ಹೇಳೋದನ್ನು ನಾವೆಲ್ಲರೂ ಕೇಳಿದ್ದೇವೆ. ಮದುವೆ ಅಂದ್ರೆನೇ ಹಾಗೇ ಗಂಡು -ಹೆಣ್ಣು ಅಷ್ಟೇ ಅಲ್ಲ ಎರಡು ಕುಟುಂಬಗಳ ಸಮ್ಮಿಲನ ಕೂಡ. ಆರಂಭದಲ್ಲಿ ದಂಪತಿಗಳು ಅನ್ಯೋನ್ಯವಾಗಿರುತ್ತಾರೆ. ಆದರೆ ಎಲ್ಲಾ ಸಮಯವೂ ಯಾವಾಗಲೂ ಒಂದೇ ಆಗಿರುವುದಿಲ್ಲ. ದಿನಗಳು ಕಳೆದಂತೆ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
ಸಮಸ್ಯೆಗಳನ್ನು ಬಹಳ ತಾಳ್ಮೆ ಮತ್ತು ಚಾತುರ್ಯತೆಯಿಂದ ಪರಿಹರಿಸಿದರೆ, ಸಂಬಂಧವು ಗಟ್ಟಿಯಾಗಿಯೇ ಉಳಿಯುತ್ತದೆ. ಇಲ್ಲದಿದ್ದರೆ ವೈವಾಹಿಕ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಂಗಾತಿಯೊಂದಿಗೆ ಸಂತೋಷ ಮತ್ತು ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಲು, ಮದುವೆಯ ನಂತರ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡಬಾರದು.

ನಿಮ್ಮನ್ನು ನಿರ್ಲಕ್ಷಿಸುವುದು: ವಿವಾಹಿತ ಮಹಿಳೆಯರು ತಮ್ಮ ಸ್ವಂತ ಅಗತ್ಯಗಳಿಗಿಂತ ಹೆಚ್ಚಾಗಿ ಕುಟುಂಬದ ಜವಾಬ್ದಾರಿಗಳಿಗೆ ಆದ್ಯತೆ ನೀಡುತ್ತಾರೆ. ಗಂಡನ ಜೊತೆಯಲ್ಲಿ ಅತ್ತೆಯನ್ನು ನೋಡಿಕೊಳ್ಳುವುದು, ತಮ್ಮ ಬಿಡುವಿನ ವೇಳೆಯನ್ನು ಮನೆ ಕೆಲಸ ಮಾಡುವುದರಲ್ಲಿ ಕಳೆಯುತ್ತಾರೆ. ಇದರಿಂದ ತಮ್ಮ ಆಸೆಗಳನ್ನು ಮತ್ತು ಗುರಿಗಳನ್ನು ಮೂಲೆಗೆ ಹಾಕುತ್ತಾರೆ. ಆದರೆ ಭವಿಷ್ಯದಲ್ಲಿ ಪತಿ ಅಥವಾ ಅತ್ತೆಯೊಂದಿಗಿನ ಸಂಬಂಧಗಳು ಹಾಳಾಗಬಹುದು.
ಆಗ ಅವರಿಗಾಗಿ ನನ್ನ ಜೀವನವನ್ನೇ ತ್ಯಾಗ ಮಾಡಿದ್ದೇನೆ ಎಂದು ಬೇಸರಿಸಿಕೊಂಡರೆ ಪ್ರಯೋಜನವಿಲ್ಲ. ಕೌಟುಂಬಿಕ ಜವಾಬ್ದಾರಿಗಳಿಗೆ ಆದ್ಯತೆ ನೀಡಿ. ವೃತ್ತಿಜೀವನದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಬೇಡಿ. ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ನೀವು ಮುನ್ನಡೆದರೆ, ನಿಮ್ಮ ಸಂಬಂಧದಲ್ಲಿ ನಿರಾಶೆ ಮತ್ತು ವಿಷಾದಕ್ಕೆ ಅವಕಾಶವಿರುವುದಿಲ್ಲ.

ಪತಿ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾನೆ ಅಂತ ಭಾವಿಸುವುದು: ಅನೇಕ ಮಹಿಳೆಯರು ತಾವು ಸರಿಯಾಗಿ ಮಾತನಾಡದಿದ್ದರೂ ತಮ್ಮ ಪತಿಯೇ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ. ನಿರ್ದಿಷ್ಟವಾಗಿ ಹೇಳದಿದ್ದರೂ, ಅವರು ತಮ್ಮ ಭಾವನೆಗಳು, ಆಸೆಗಳು ಮತ್ತು ಅಗತ್ಯಗಳನ್ನು ತಿಳಿದುಕೊಳ್ಳುತ್ತಾರೆ ಎಂದು ಅಂದುಕೊಳ್ಳುತ್ತಾರೆ. ನೀವು ಅಂತಹ ತಪ್ಪನ್ನೇ ಮಾಡುತ್ತಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ. ಏಕೆಂದರೆ ಹೀಗೆ ಮಾಡುವುದರಿಂದ ಅನಗತ್ಯ ಗೊಂದಲಗಳು ಉಂಟಾಗಬಹುದು. ಹಾಗಾಗಿ ನಿಮ್ಮ ವಿಚಾರಗಳನ್ನು ನಿಮ್ಮ ಪತಿಯೊಂದಿಗೆ ನೇರವಾಗಿ ಸಂವಹನ ಮಾಡುವುದು ಉತ್ತಮ. ನಿಮ್ಮ ಅಗತ್ಯಗಳನ್ನು ನೀವು ಪ್ರಸ್ತಾಪಿಸಿದರೆ ಮಾತ್ರ ನಿಮ್ಮ ಪತಿಗೆ ತಿಳಿಯುತ್ತದೆ.

ಅನ್ಯೋನ್ಯತೆಯನ್ನು ತಪ್ಪಿಸುವುದು: ಪತಿ ಮತ್ತು ಪತ್ನಿಯ ನಡುವಿನ ಅನ್ಯೋನ್ಯತೆ ಬಹಳ ಮುಖ್ಯ. ಸಂತೋಷ ಮತ್ತು ದುಃಖವನ್ನು ಒಟ್ಟಿಗೆ ಹಂಚಿಕೊಳ್ಳಬೇಕು. ಕುಟುಂಬ ಮತ್ತು ವೈಯಕ್ತಿಕ ಸವಾಲುಗಳ ಬಗ್ಗೆ ಯಾವಾಗಲೂ ಪರಸ್ಪರ ಮಾತನಾಡಿ. ಪ್ರೀತಿ, ಪ್ರಣಯ, ಆತ್ಮೀಯತೆ, ಲೈಂಗಿಕತೆ ಎಲ್ಲವೂ ಸಂಬಂಧದ ಭಾಗವಾಗಿರಬೇಕು. ಮಹಿಳೆಯರು ತಮ್ಮ ಗಂಡನ ಅನ್ಯೋನ್ಯತೆಯನ್ನು ತಪ್ಪಿಸಲು ಪ್ರಯತ್ನಿಸಬಹುದು. ಏಕೆಂದರೆ ಅವರು ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ. ಈ ರೀತಿ ಮಾಡುವುದು ಸರಿಯಲ್ಲ. ಏಕೆಂದರೆ ಇದು ಇಬ್ಬರ ನಡುವಿನ ಅಂತರವನ್ನು ಹೆಚ್ಚಿಸುತ್ತದೆ. ಭವಿಷ್ಯದಲ್ಲಿ, ಸಂಬಂಧವು ಹಾಳಾಗಬಹುದು.
ನಿರೀಕ್ಷೆಗಳ ಹೊಂದಾಣಿಕೆ: ಪತ್ನಿಯ ಅಗತ್ಯಗಳನ್ನು ಪೂರೈಸುವುದು ಗಂಡನ ಜವಾಬ್ದಾರಿಯಾಗಿದೆ. ಆದರೆ ಕೆಲವು ಮಹಿಳೆಯರು ತಮ್ಮ ಗಂಡನ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಅವುಗಳನ್ನು ಪೂರೈಸದಿದ್ದರೆ, ಅವರ ಮೇಲೆ ತೀವ್ರವಾಗಿ ನಿರಾಶೆಗೊಳ್ಳುತ್ತೀರಿ. ಗಂಡನ ಮೇಲೆ ವಂಚನೆ ಆರೋಪ ಮಾಡುತ್ತೀರಿ. ವೈವಾಹಿಕ ಜೀವನಕ್ಕೆ ಇದು ಒಳ್ಳೆಯದಲ್ಲ. ನೀವು ಇಂತಹ ತಪ್ಪು ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ.
ಗಂಡನೇ ಎಲ್ಲವನ್ನೂ ಮಾಡುತ್ತಾನೆ ಅಂತ ಭಾವಿಸುವುದು: ಎಲ್ಲಾ ಸಂಬಂಧಗಳು ಒಂದೇ ರೀತಿ ಇರುವುದಿಲ್ಲ. ಏಕೆಂದರೆ ಪ್ರತಿಯೊಂದು ಸಂಬಂಧವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಸವಾಲುಗಳು ಭಿನ್ನವಾಗಿವೆ. ಜೀವನದಲ್ಲಿ ಏರಿಳಿತಗಳು ಸಹಜ. ಜೀವನದ ಹಾದಿಯಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಯನ್ನು ಒಟ್ಟಾಗಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ದಂಪತಿಗಳಿಬ್ಬರೂ ಒಟ್ಟಿಗೆ ಮಾತನಾಡುವ ಮೂಲಕ ಮಾತ್ರ ಸಮಸ್ಯೆಗಳನ್ನು ಪರಿಹರಿಸಬೇಕು. ಆದರೆ ಅನೇಕ ಮಹಿಳೆಯರು ತಮ್ಮ ಗಂಡಂದಿರು ಎಲ್ಲಾ ಸಮಸ್ಯೆಗಳನ್ನು ನೋಡಿಕೊಳ್ಳುತ್ತಾರೆ ಎಂದು ಭಾವಿಸುತ್ತಾರೆ.

ಅನೇಕ ಸಂದರ್ಭಗಳಲ್ಲಿ ಗಂಡನ ಮೇಲೆ ಹೊರೆ ಹಾಕುತ್ತಾರೆ. ಒಂದು ಸಂದರ್ಭದಲ್ಲಿ ನಿಮ್ಮ ಪತಿ ನಿಮ್ಮ ಬಗ್ಗೆ ಅಸಹನೆ ಹೊಂದಬಹುದು. ಆದ್ದರಿಂದ ಮಹಿಳೆಯರೇ, ನೀವು ಈ ತಪ್ಪು ಮಾಡುತ್ತಿದ್ದರೆ, ತಕ್ಷಣವೇ ತಪ್ಪಿಸಿ.