ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ‘ಕಾಂತಾರ’ ಸ್ಟಾರ್ ರೆಡಿ- ಹನುಮಂತನ ಪಾತ್ರದಲ್ಲಿ ರಿಷಬ್ ಶೆಟ್ಟಿ ಮೋಡಿ

public wpadmin

‘ಕಾಂತಾರ’ ಕಣಕ್ಕಿಳಿದಿರುವ ಕಾಡುಬೆಟ್ಟ ಶಿವನ ಲುಕ್ಕು ಕಣ್ತುಂಬಿಕೊಳ್ಳುವುದ್ದಕ್ಕೆ ಅಖಂಡ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯ್ತಿದ್ದಾರೆ. ಕುಂದಾಪುರದ ಕೆರಾಡಿ ಹುಡ್ಗ ‘ಕಾಂತಾರ’ ಪ್ರೀಕ್ವೆಲ್ ಮೂಲಕ ಕದಂಬರ ಕಥೆ ಹರವಿಡೋದಿಕ್ಕೆ ರೆಡಿಯಾಗಿರುವುದರ ಜೊತೆಗೆ ಪುರಾತನ ಸಮರ ಕಲೆ ಕಳರಿಪಯಟ್ಟು ಕಲೆಯನ್ನ ಕಟ್ಟಿಕೊಡಲು ಕಸರತ್ತು ನಡೆಸಿದ್ದಾರೆ. ಇದರ ನಡುವೆ ಹನುಮಾನ್ ಪಾತ್ರದಲ್ಲಿ ಮಿಂಚಲು ರಿಷಬ್ ಶೆಟ್ಟಿ ರೆಡಿಯಾಗಿದ್ದಾರೆ. ಈ ಮೂಲಕ ತೆಲುಗಿಗೆ ನಟ ಎಂಟ್ರಿ ಕೊಟ್ಟಿದ್ದಾರೆ.

ಟಾಲಿವುಡ್ ಅಂಗಳದಲ್ಲಿ ಮೂಡಿಬಂದಿದ್ದ ‘ಜೈ ಹನುಮಾನ್’ ಸಿನಿಮಾ ಸಕ್ಸಸ್‌ ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದ ಹನುಮಾನ್ ಸಿನಿಮಾದ ಸೀಕ್ವೆಲ್ ಮೂಡಿಬರುತ್ತಿದ್ದು, ಇದೀಗ ಪ್ಯಾನ್‌ ಇಂಡಿಯಾ ಹಿಟ್ ಸೀಕ್ವೆಲ್‌ನಲ್ಲಿ ‘ಕಾಂತಾರ’ ಶಿವ ನಟಿಸುವುದು ಅಧಿಕೃತವಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಡೈರೆಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿರುವ ‘ಹನುಮಾನ್’ ಸಿನಿಮಾದ ಸೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ನಿರ್ದೇಶಕ ಪ್ರಶಾಂತ್ ವರ್ಮಾ ‘ಜೈ ಹನುಮಾನ್’ ಚಿತ್ರದ ಸೀಕ್ವೆಲ್‌ನಲ್ಲಿ ಹನುಮಾನ್ ಪಾತ್ರಧಾರಿಗೆ ಬಹಳಷ್ಟು ಅಳೆದೂ ತೂಗಿ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಕಾಂತಾರ ಸೀಕ್ವೆಲ್‌ಗಾಗಿ ನ್ಯಾಷನಲ್ ಅವಾರ್ಡ್‌ ಮುಡಿಗೇರಿಸಿಕೊಂಡಿರುವ ಡಿವೈನ್ ಸ್ಟಾರ್ ಕೇವಲ ನಟರಾಗಿ ಅಷ್ಟೇ ಅಲ್ಲದೆ, ನಿರ್ದೇಶಕರಾಗಿಯೂ ಪ್ಯಾನ್ ಇಂಡಿಯಾದಾದ್ಯಂತ ಮೋಡಿ ಮಾಡಿದ್ದಾರೆ. ಇದೇ ಕಾರಣಕ್ಕೆ ಯಾವುದೇ ಪಾತ್ರವನ್ನಾದರೂ ರಿಷಬ್ ನಿಭಾಯಿಸಬಲ್ಲರು. ಜೊತೆಗೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ವಿಭಾಗಗಳಲ್ಲೂ ರಿಷಬ್ ಶೆಟ್ಟಿಗೆ ಕಂಟ್ರೋಲ್ ಇರೋದ್ರಿಂದ ‘ಹನುಮಾನ್’ ಸಿನಿಮಾದ ಸೀಕ್ವೆಲ್‌ಗೆ ಪ್ಲಸ್ ಪಾಯಿಂಟ್ಸ್ ಆಗಲಿದೆ.

ಕೈಯಲ್ಲಿ ರಾಮನ ವಿಗ್ರಹ ಹಿಡಿದು ರಿಷಬ್ ಶೆಟ್ಟಿ ಹನುಮಾನ್ ಪಾತ್ರದಲ್ಲಿ ಪವರ್‌ಫುಲ್ ಪೋಸ್ಟ್ ಕೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ‘ಜೈ ಹನುಮಾನ್’ ಸಿನಿಮಾವನ್ನು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್‌ನ ಭಾಗವಾಗಿ ತಯಾರಾಗಲಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡಲಿದ್ದಾರೆ.

Share This Article
Leave a comment