ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿರುವ ಹೊತ್ತಿನಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುವ ಹೊತ್ತಿನಲ್ಲೇ ಕುಂದಾನಗರಿ ಬೆಳಗಾವಿಯಲ್ಲಿ `ವಿಷ್ಯದ ಮುಖ್ಯಮಂತ್ರಿ’ ಬ್ಯಾನರ್ ಭಾರೀ ಕುತೂಹಲ ಮೂಡಿಸಿದೆ.
ಭಾನುವಾರ ಬೆಳಗಾವಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಆದಿಶಕ್ತಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಹೊತ್ತಿನಲ್ಲೇ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭಾವಚಿತ್ರ ಇರೋ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಈ ಬ್ಯಾನರ್‌ನಲ್ಲಿ ಜಾರಕಿಹೊಳಿ ಭಾವಚಿತ್ರದ ಕೆಳಗೆ ʻಭವಿಷ್ಯದ ಮುಂದಿನ ಮುಖ್ಯಮಂತ್ರಿʼ ಎಂದು ಬರೆಯಲಾಗಿದೆ. ಜೊತೆಗೆ ಉಳಿದ ಸಹೋದರರು ಹಾಗೂ ಅವರ ಮಕ್ಕಳ ಭಾವಚಿತ್ರಗಳನ್ನು ಬ್ಯಾನರ್‌ನಲ್ಲಿ ಹಾಕಿಸಲಾಗಿದೆ. ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಭೀಮಶಿ ಜಾರಕಿಹೊಳಿ, ಎಂಎಲ್‌ಸಿ ಲಖನ್ ಜಾರಕಿಹೊಳಿ, ಸತೀಶ್ ಪುತ್ರಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಅವರ ಭಾವಚಿತ್ರಗಳೂ ಇವೆ.
ಕಳೆದ ಕೆಲ ದಿನಗಳಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಚರ್ಚೆಯಲ್ಲಿದೆ. ಬಿಜೆಪಿ ನಾಯಕರೂ ಸಹ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇತ್ತ ಸತೀಶ್ ಜಾರಕಿಹೊಳಿ, ಡಿ.ಕೆ ಶಿವಕುಮಾರ್ ಅಥವಾ ಹೆಚ್.ಸಿ ಮಹದೇವಪ್ಪ ಮೂವರಲ್ಲಿ ಒಬ್ಬರಿಗೆ ಚಾನ್ಸ್ ಸಿಗಬಹುದು ಎಂಬ ವದಂತಿಗಳೂ ಹರಿದಾಡುತ್ತಿವೆ. ಈ ನಡುವೆ ಸತೀಶ್ ಜಾರಕಿಹೊಳಿ ಅವರ ನಡೆ ದಿನದಿಂದ ದಿನಕ್ಕೆ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ.