ಬೆಂಗಳೂರು: ನಗರದ ಸಂಪಿಗೆ ಥಿಯೇಟರ್ ಮಾಲೀಕನ ಕೈಕಾಲು ಕಟ್ಟಿ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿದ್ದ ದಂಪತಿಯನ್ನು ಜಯನಗರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ಎಂದು ಗುರುತಿಸಲಾಗಿದೆ. ಆರೋಪಿಗಳು ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಮನೆಯಲ್ಲಿ 2 ವರ್ಷದಿಂದ ಕೆಲಸ ಮಾಡಿಕೊಂಡಿದ್ದರು. ಅ.2 ರಂದು ಜಯನಗರ 3ನೇ ಬ್ಲಾಕ್‍ನಲ್ಲಿರುವ ಮನೆಯಲ್ಲಿ ನಾಗೇಶ್ ಒಬ್ಬರೇ ಇದ್ದ ವೇಳೆ ದಂಪತಿ ಅವರ ಕೈಕಾಲು ಕಟ್ಟಿ 2ಲಕ್ಷ ರೂ. ನಗದು ಹಾಗೂ 1 ಕೆಜಿ ಚಿನ್ನವನ್ನು ದೋಚಿದ್ದರು.
ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ಹಾಗೂ ಮೊಬೈಲ್ ನೆಟ್‍ವರ್ಕ್ ಆಧರಿಸಿ ಪೊಲೀಸರು ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.