ಬೆಂಗಳೂರು: ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿದ್ದಾರೆ. ಗುಡುಗು ಸಹಿತ ಸುರಿದ ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ನಾನಾ ಅವಾಂತರಗಳು ಸೃಷ್ಟಿಯಾಗಿದೆ.
ಕೆಂಗೇರಿ (Kengeri), ಆರ್ ಆರ್ ನಗರ, ದಾಸರಹಳ್ಳಿ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತ್ತು. ಅದೇ ರೀತಿ ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲೂ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಇಲ್ಲಿನ ಜನ ಜಲ ದಿಗ್ಬಂಧನದಲ್ಲಿದ್ದಾರೆ. ಇಡೀ ರಸ್ತೆ ನೀರಿನಿಂದ ತುಂಬಿರುವ ಕಾರಣ ಇದೇ ರಸ್ತೆಯಲ್ಲಿರೋ ಮನೆಗಳಿಗೆ ಹೋಗುವವರು, ಬರುವವರು ಬೇರೆ ಪರ್ಯಾಯ ಮಾರ್ಗವಿಲ್ಲದೇ ಕೊಳಚೆ ನೀರಿನಲ್ಲೇ ಓಡಾಟ ಮಾಡುತ್ತಿದ್ದಾರೆ.
ಇತಿಹಾಸ ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ದೇವಾಲಯಕ್ಕೂ ಜಲ ಕಂಟಕ ಶುರುವಾಗಿ ಅದೆಷ್ಟೋ ವರ್ಷಗಳೇ ಕಳೆದಿದೆ. ಮಳೆ ಬಂದರೆ ಸಾಕು ದೇವಾಲಯದ ಆವರಣಕ್ಕೂ ಮಳೆ ನೀರು ರಾಜಕಾಲುವೆ ನೀರು ಹರಿದು ಬರುತ್ತಿದೆ. ಭಾನುವಾರ ಸುರಿದ ಮಳೆಗೂ ದೇವಾಲಯ ಹೊರ ಭಾಗ ಜಲವೃತವಾಗಿದ್ದು, ಮಳೆ ನಿಂತರೂ ದೇವಾಲಯದ ಹೊರ ಭಾಗದ ಮುಖ್ಯ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೂ ಸಮಸ್ಯೆ ಆಗುತ್ತಿದೆ.
ಓಕಳಿಪುರಂ ಅಂಡರ್ ಪಾಸ್ ಕೆರೆಯಂತೆ ಆಗಿದ್ದು, ಎರಡು ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ಜೆಜೆ ಆರ್ ನಗರದ ವಿಎಸ್ ಗಾರ್ಡನ್‌ನಲ್ಲಿ ಮೋರಿ ತಡೆಗೋಡೆ ಕುಸಿತಗೊಂಡು 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮುಂಜಾನೆಯಿಂದಲೂ ಸುರಿಯುತ್ತಿರುವ ಮಳೆ ಹಿನ್ನೆಲೆ ಸರ್ಜಾಪುರ ಆರ್‌ಜಿಬಿ ಟೆಕ್ ಪಾರ್ಕ್ ಎದುರು ಜಲಾವೃತಗೊಂಡಿದೆ. ಬಿಬಿಎಂಪಿ ಗ್ರಾಮಪಂಚಾಯತ್ ಬಾರ್ಡರ್‌ನಲ್ಲಿ ಬರುವ ಆರ್‌ಜಿಬಿ ಟೆಕ್ ಪಾರ್ಕ್ ಸಮೀಪದ ರೈಲ್ವೆ ಮಾರ್ಗದ ಬಳಿ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣ ನೀರು ನಿಲ್ಲುತ್ತಿದೆ. ಪದೇ ಪದೇ ಜಲಾವೃತವಾಗುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.