ಸಾಗರ(ಶಿವಮೊಗ್ಗ): ಚೈತ್ರಾ ಕುಂದಾಪುರ ಅವರನ್ನು ಬಿಗ್‌ಬಾಸ್ ಸೀಸನ್ ಕನ್ನಡ 11 ಕಾರ್ಯಕ್ರಮದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕಲರ್ಸ್ ವಾಹಿನಿಗೆ ವಕೀಲರೊಬ್ಬರು ನೋಟಿಸ್ ಕಳುಹಿಸಿದ್ದಾರೆ.
ಸಾಗರದ ವಕೀಲ ಭೋಜರಾಜ್ ಎಂಬುವರು ಕಲರ್ಸ್ ಕನ್ನಡಕ್ಕೆ ಬರೆದಿರುವ ಪತ್ರ ವೈರಲ್ ಆಗಿದೆ, ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಚೈತ್ರಾಳನ್ನು ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರ ಕಳುಹಿಸಬೇಕು. ಇಲ್ಲವಾದರೆ ವಾಹಿನಿ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ವಕೀಲರು ಎಚ್ಚರಿಸಿದ್ದಾರೆ.
ಚೈತ್ರಾ ವಿರುದ್ದ ಗಲಾಟೆ, ದೊಂಬಿ, ಜೀವ ಬೆದರಿಕೆ ಹಾಗೂ ವಂಚನೆ ಮುಂತಾದ ಪ್ರಕರಣಗಳು ದಾಖಲಾಗಿದ್ದು, ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರುವ ಬಗ್ಗೆ ನೋಟಿಸ್‌ನಲ್ಲಿ ವಕೀಲರು ಪ್ರಶ್ನಿಸಿದ್ದಾರೆ.
ಚೈತ್ರಾಳ ವಿರುದ್ಧ ಸಾಕಷ್ಟು ಪ್ರಕರಣಗಳಿದ್ದು, ನನಗೆ ಆಕೆಯೊಂದಿಗೆ ವೈಯಕ್ತಿಕವಾಗಿ ಯಾವುದೇ ವೈಷಮ್ಯವಿಲ್ಲ. ಆದರೆ ಆಕೆಯನ್ನು ಸ್ಪರ್ಧಿಯಾಗಿ ಮುಂದುವರಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಈ ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರಕಳಿಸುವಂತೆ ನೋಟಿಸ್‌ನಲ್ಲಿ ಆಗ್ರಹಿಸಿದ್ದಾರೆ.
ಬಿಗ್‌ಬಾಸ್‌ನಲ್ಲಿ ನಟ ಸುದೀಪ್ ಅವರು ಚೈತ್ರಾಳನ್ನು “ಹಿಂದೂ fire brand” ಎಂದು ಹೊಗಳಿದ್ದಾರೆ. ಮಾತ್ರವಲ್ಲ, ಈಗಾಗಲೇ ಚೈತ್ರಾಳ ವಿರುದ್ಧ ಸುಮಾರು 11 ಕೇಸ್‌ಗಳು ದಾಖಲಾಗಿವೆ. ‘ಹಿಂದಿನ ಸೀಸನ್ ನಡೆಯುವ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದುಕೊಂಡು ಬಿಗ್‌ಬಾಸ್ ವೀಕ್ಷಣೆ ಮಾಡಿದ್ದೇನೆ’ ಎಂದು ಚೈತ್ರಾ ಹೇಳಿರುವುದು ಪ್ರೇಕ್ಷಕರಿಗೆ ಮುಜುಗರವುಂಟುಮಾಡಿದೆ ಎಂದು ತಿಳಿಸಿದ್ದಾರೆ.
ಕಲರ್ಸ್ ಚಾನಲ್ ಟಿಆರ್‌ಪಿಗಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು, ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ಈ ನೋಟಿಸ್ ಮೂಲಕ ತಮಗೆ ತಿಳಿಯಪಡಿಸುವುದೇನೆಂದರೆ, ಚೈತ್ರಾಳನ್ನು ಈ ನೋಟಿಸ್ ನ ಪ್ರತಿಯ ಇಮೇಲ್ ತಲುಪಿದ ತಕ್ಷಣವೇ ಸ್ಪರ್ಧೆಯಿಂದ ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭೋಸರಾಜ್ ಹೇಳಿದ್ದಾರೆ.