ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?

public wpadmin

ಭೂಮಿಯಲ್ಲಿರುವ ನಮಗೆ ದಿನವೊಂದಕ್ಕೆ ಒಂದೇ ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಣುತ್ತದೆ. ಒಂದು ದಿನಕ್ಕೆ 24 ಗಂಟೆಗಳು. ಅದರಲ್ಲಿ 12 ಗಂಟೆ ಬೆಳಕು, ಇನ್ನು 12 ಗಂಟೆ ಕತ್ತಲಿರುತ್ತದೆ. ಸೂರ್ಯೋದಯದ ಮೂಲಕ ಬೆಳಗಿನ ಆಗಮನ ಮತ್ತು ಸೂರ್ಯಾಸ್ತದ ಮೂಲಕ ಕತ್ತಲಾಗಮನವಾಗುತ್ತದೆ. ಇವೆರಡೂ ದಿನಕ್ಕೆ ಒಮ್ಮೆ ಮಾತ್ರ ಸಂಭವಿಸುತ್ತದೆ. ಆದರೆ, ನಿಮಗೆ ಗೊತ್ತೆ? ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ದಿನಕ್ಕೆ ಒಮ್ಮೆಯಲ್ಲ ಬರೋಬ್ಬರಿ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಅನುಭವವಾಗುತ್ತಿದೆ. ಹಾಗಂದ್ರೆ ನೀವು ನಂಬ್ತೀರಾ? ನಂಬಲೇಬೇಕು.

ಬಾಹ್ಯಾಕಾಶ ನಿಲ್ದಾಣದಲ್ಲಿ ಈ ವಿಶಿಷ್ಟ ವಿದ್ಯಾಮಾನಕ್ಕೆ ಸಾಕ್ಷಿಯಾಗಿರುವವರು ಬರ‍್ಯಾರು ಅಲ್ಲ. ಭಾರತ ಮೂಲಕ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್. ಎಂಟು ದಿನಗಳಲ್ಲಿ ಭೂಮಿಗೆ ವಾಪಸ್ ಆಗುವ ಯೋಜನೆಯೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿದ್ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಕೋರ್ ಅವರು ಐದು ತಿಂಗಳಿಂದ ಅಲ್ಲೇ ಸಿಲುಕಿಕೊಂಡಿದ್ದಾರೆ. ಈ ಸನ್ನಿವೇಶದಲ್ಲಿ ಗಗನಯಾತ್ರಿಗಳಿಗೆ ಸೂರ್ಯೋದಯ ಮತ್ತು ಸೂರ್ಯಾಸ್ತದ ವಿದ್ಯಾಮಾನದಲ್ಲಿ ಅದ್ಭುತ ಅನುಭವವಾಗಿದೆ. ಅಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ದಿನಕ್ಕೆ ಒಂದು ಬಾರಿಯಲ್ಲ ಬರೋಬ್ಬರಿ 16 ಕಾಣುತ್ತಿದ್ದೇವೆ ಎಂದು ಸುನಿತಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ. ಬಾಹ್ಯಾಕಾಶದಲ್ಲಿ ವಾಸಿಸುವವರಿಗೆ ಅಂತಹ ವೀಕ್ಷಣೆಗಳು ಜೀವನದ ನಿಯಮಿತ ಭಾಗವಾಗುತ್ತವೆ.

ಜೂ.5 ರಂದು ಬೋಯಿಂಗ್ ಸ್ಟಾರ್‌ಲೈನರ್ ಹೊತ್ತೊಯ್ದಿದ್ದ ರಾಕೆಟ್, ಜೂ.6 ರಂದು ಬಾಹ್ಯಾಕಾಶ ನಿಲ್ದಾಣದ ಬಳಿ ತಲುಪಿತು. ಆದರೆ ಸ್ಟಾರ್‌ಲೈನರ್ ಎಂಜಿನ್‌ಗಳಲ್ಲಿ ದೋಷ ಕಂಡಿದ್ದರಿಂದ ನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಜೋಡಿಸಲಾಯಿತು. ಈಗ ಇಬ್ಬರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಇದ್ದಾರೆ. ಅದು ಪ್ರತಿ ಗಂಟೆಗೆ ಸರಿಸುಮಾರು 28,000 ಕಿಮೀ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ. ಐಎಸ್‌ಎಸ್ ಪ್ರತಿ 90 ನಿಮಿಷಗಳಿಗೊಮ್ಮೆ ಭೂಮಿಯ ಪೂರ್ತಿ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ವೇಗವಾಗಿ ಚಲಿಸುವ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಸುಮಾರು 45 ನಿಮಿಷಗಳಿಗೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ಅನುಭವಿಸುತ್ತಾರೆ. ಭೂಮಿ ಮೇಲಿರುವ ಜನರು ದಿನಕ್ಕೆ ಒಂದು ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ಅನುಭವ ಹೊಂದುತ್ತಾರೆ. ಆದರೆ, ನಾವು ದಿನಕ್ಕೆ 16 ಬಾರಿ ಸೂರ್ಯ ಉದಯಿಸುವುದು ಮತ್ತು 16 ಬಾರಿ ಮುಳುಗುವುದನ್ನು ಕಾಣುತ್ತಿದ್ದೇವೆಂದು ಗಗನಯಾತ್ರಿಗಳು ಹೇಳಿಕೊಂಡಿದ್ದಾರೆ.

ಭೂಮಿಯ ಮೇಲಿನ ಜೀವನಕ್ಕಿಂತ ಬಾಹ್ಯಾಕಾಶದ ಬದುಕು ಭಿನ್ನವಾಗಿರುತ್ತದೆ. ಭೂಮಿಯಲ್ಲಿ ಒಂದು ದಿನವು 12 ಗಂಟೆಗಳ ಬೆಳಕು ಮತ್ತು 12 ಗಂಟೆಗಳ ಕತ್ತಲೆಯನ್ನು ಒಳಗೊಂಡಿರುತ್ತದೆ. ಆದರೆ, ಐಎಸ್‌ಎಸ್‌ನಲ್ಲಿ ಗಗನಯಾತ್ರಿಗಳು ಹೆಚ್ಚು ವೇಗದ ಚಕ್ರದ ಮೂಲಕ ಬದುಕುತ್ತಾರೆ. ಅವರು 45 ನಿಮಿಷಗಳ ಹಗಲು ಮತ್ತು ಅಷ್ಟೇ ನಿಮಿಷಗಳ ಕತ್ತಲನ್ನು ಅನುಭವಿಸುತ್ತಾರೆ. ಇದು ಹಗಲು-ರಾತ್ರಿಗಳ ನಿರಂತರ ಲಯವನ್ನು ಸೃಷ್ಟಿಸುತ್ತದೆ.

ಬಾಹ್ಯಾಕಾಶದಲ್ಲಿ ಸಾಂಪ್ರದಾಯಿಕ ಹಗಲು-ರಾತ್ರಿ ಲಯಗಳು ಅನ್ವಯಿಸುವುದಿಲ್ಲ. ಏಕೆಂದರೆ ಗಗನಯಾತ್ರಿಗಳು ಪ್ರತಿ 90 ನಿಮಿಷಗಳಿಗೊಮ್ಮೆ ಗ್ರಹವನ್ನು ಸುತ್ತುತ್ತಾರೆ. ಸೂರ್ಯನ ಬೆಳಕಿನ ನೈಸರ್ಗಿಕ ಸೂಚನೆಗಳಿಲ್ಲದೆ, ಐಎಸ್‌ಎಸ್‌ನಲ್ಲಿನ ಗಗನಯಾತ್ರಿಗಳು ತಮ್ಮ ವೇಳಾಪಟ್ಟಿಯನ್ನು ರೂಪಿಸಲು ಸಂಘಟಿತ ಸಾರ್ವತ್ರಿಕ ಸಮಯವನ್ನು (ಯುಟಿಸಿ) ಅನುಸರಿಸುತ್ತಾರೆ. ಅವರ ದಿನಚರಿಗಳು ಹೆಚ್ಚು ರೆಜಿಮೆಂಟ್ ಆಗಿದ್ದು, ಐದು ನಿಮಿಷಗಳ ಮಧ್ಯಂತರದಲ್ಲಿ ಕೆಲಸ, ಊಟ ಮತ್ತು ವಿಶ್ರಾಂತಿಯನ್ನು ನಿಗದಿಪಡಿಸಲಾಗಿದೆ. ಬಾಹ್ಯಾಕಾಶದ ಶೂನ್ಯ ಗುರುತ್ವ ಪರಿಸರದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಶಿಸ್ತಿನ ರಚನೆಯು ಅತ್ಯಗತ್ಯ.

ಗಗನಯಾತ್ರಿಗಳು ಪರಮಾಣು ಗಡಿಯಾರಗಳನ್ನು (ಆಟೋಮಿಕ್ ಕ್ಲಾಕ್) ಅವಲಂಬಿಸಿರುತ್ತಾರೆ. ಇದು ನ್ಯಾವಿಗೇಷನ್‌ನಂತಹ ಕಾರ್ಯಗಳಿಗೆ ವಿಶೇಷವಾಗಿ, ಭೂಮಿಯ ಕಕ್ಷೆಯಿಂದಾಚೆಯ ಕಾರ್ಯಾಚರಣೆಗಳಿಗೆ ಅತ್ಯಂತ ನಿಖರತೆಯನ್ನು ಒದಗಿಸುತ್ತದೆ. ಬಾಹ್ಯಾಕಾಶ ಕಾರ್ಯಾಚರಣೆಗಳ ಯಶಸ್ಸಿಗೆ ಈ ಸಮಯಪಾಲನಾ ಸಾಧನಗಳು ನಿರ್ಣಾಯಕವಾಗಿವೆ.ಭಾರತ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ಅವರು ಈಗ ಭೂಮಿಯಿಂದ 400 ಕಿ.ಮೀ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ. ಅಲ್ಲಿಗೆ ಹೋಗಿ ವಾಪಸ್ ಬರುವುದು ಅಷ್ಟು ಸುಲಭವಲ್ಲ. ಒಮ್ಮೆ ಹೋದರೆ ಕನಿಷ್ಠ 6 ತಿಂಗಳು ಅಲ್ಲೇ ಇರಬೇಕಾಗುತ್ತದೆ. ವರ್ಷದವರೆಗೂ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ಬರಬಹುದು. ಇದಕ್ಕೆಲ್ಲ ಗಗನಯಾತ್ರಿಗಳು ಅಗತ್ಯ ಸಿದ್ಧತೆಗಳೊಂದಿಗೆ ಸಜ್ಜಾಗಿರುತ್ತಾರೆ. 2025ರ ಫೆಬ್ರವರಿ ವರೆಗೂ ಸುನಿತಾ ವಿಲಿಯಮ್ಸ್ ಅಲ್ಲೇ ಉಳಿಯಬೇಕಾಗಿದೆ.

ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ಯಾಕೆ?
ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿದೆ.

ಐಎಸ್‌ಎಸ್ ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಇದು ಸುಮಾರು 109 ಅಡಿ ಉದ್ದವಿದೆ. 9,25,335 ಪೌಂಡ್ (419,725 ಕೆ.ಜಿ) ತೂಕವಿದೆ. ಇದಕ್ಕೆ ಅಳವಡಿಸಿರುವ ಸೋಲಾರ್ ಪ್ಯಾನೆಲ್ ಒಂದು ಎಕರೆ ಪ್ರದೇಶದಷ್ಟು ವ್ಯಾಪಿಸಿದೆ. ಸಂಶೋಧನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಆಗಮಿಸುವ ಗಗನನೌಕೆಗಳನ್ನು ಹೊರತುಪಡಿಸಿದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಬ್ಬಂದಿಗೆ ಜೀವಿಸಲು ಮತ್ತು ಕಾರ್ಯಾಚರಣೆ ನಡೆಸಲು ಸ್ಥಳಾವಕಾಶವನ್ನು ಇದು ಹೊಂದಿದೆ. ಇದರಲ್ಲಿ ಆರು ಮಲಗುವ ಜಾಗಗಳು, ಎರಡು ಸ್ನಾನಗೃಹಗಳು, ಒಂದು ವ್ಯಾಯಾಮ ಕೇಂದ್ರ ಮತ್ತು 360 ಡಿಗ್ರಿಗಳ ನೋಟ ಒದಗಿಸುವ ಕಿಟಕಿಗಳು ಇವೆ. ಏಕಕಾಲದಲ್ಲಿ ಐಎಸ್‌ಎಸ್ ಎಂಟು ಬಾಹ್ಯಾಕಾಶ ನೌಕೆಗಳಿಗೆ ಸ್ಥಳಾವಕಾಶ ನೀಡಬಲ್ಲದು.

Share This Article
Leave a comment