ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ Y+ ಭದ್ರತೆಯನ್ನು ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಲ್ಮಾನ್ ಖಾನ್ ಅವರ ಆಪ್ತರಾಗಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಬಳಿಕ ಈ ಬೆಳವಣಿಗೆ ನಡೆದಿದೆ.
ಪೊಲೀಸ್ ಬೆಂಗಾವಲು ವಾಹನ ಈಗ ಸಲ್ಮಾನ್ ಖಾನ್ ಅವರ ವಾಹನದ ಜೊತೆಗೆ ಇರಲಿದೆ. ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಳಸಲು ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ ಅವರ ಜೊತೆಯಲ್ಲಿದ್ದಾರೆ. ಸಲ್ಮಾನ್ ಖಾನ್ ಅವರು ಚಿತ್ರೀಕರಣಕ್ಕಾಗಿ ಭೇಟಿ ನೀಡುವ ಯಾವುದೇ ಪ್ರದೇಶದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಅವರ ಇರುವಿಕೆಯ ಬಗ್ಗೆ ಸೂಚನೆ ನೀಡಲಾಗುತ್ತದೆ. ಪೊಲೀಸ್ ತಂಡವು ಶೂಟಿಂಗ್ ಸ್ಥಳವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಗಾರಿಕೆಯನ್ನು ವಹಿಸಿಕೊಂಡ ನಂತರ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎನ್‌ಸಿಪಿ ನಾಯಕ ಸಲ್ಮಾನ್ ಖಾನ್ ಅವರ ಜೊತೆ ನಿಕಟ ಸಂಬಂಧವನ್ನು ಹೊಂದಿದ್ದರು. ಕಳೆದ ಹಲವು ವರ್ಷಗಳಿಂದ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹಲವಾರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.
ಪನ್ವೆಲ್ ಫಾರ್ಮ್‌ಹೌಸ್‌ಗೂ ಭದ್ರತೆ
ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಫಾರ್ಮ್ ಹೌಸ್ ಒಳಗೆ ಮತ್ತು ಹೊರಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಫಾರ್ಮ್‌ಹೌಸ್ ಸುತ್ತಲೂ ಚಲಿಸುವ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ವರ್ಷದ ಜೂನ್‌ನಲ್ಲಿ ಮುಂಬೈ ಪೊಲೀಸರು ಫಾರ್ಮ್‌ಹೌಸ್ ಬಳಿ ಸಲ್ಮಾನ್ ಖಾನ್ ಅವರನ್ನು ಹತ್ಯೆಗೈಯ್ಯುವ ಯೋಜನೆಯನ್ನು ವಿಫಲಗೊಳಿಸಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಖಾನ್ ಅವರನ್ನು ಅವರ ತೋಟದ ಮನೆಯ ಬಳಿ ಅವರ ಕಾರನ್ನು ನಿಲ್ಲಿಸಿ ಎಕೆ -47 ರೈಫಲ್‌ಗಳಿಂದ ಹೊಡೆದು ಕೊಲ್ಲಲು ಯೋಜಿಸಿತ್ತು. ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ ಎರಡು ತಿಂಗಳ ನಂತರ ಈ ಘಟನೆ ಸಂಭವಿಸಿತ್ತು.
ಬಿಗ್ ಬಾಸ್ ಸೆಟ್ ನಲ್ಲಿ ಹೆಚ್ಚಿದ ಭದ್ರತೆ?
ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 18 ನೇ ಸೀಸನ್‌ನ್ನು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಮುಂಬರುವ ವೀಕೆಂಡ್ ಕಾ ವಾರ್ ಸಂಚಿಕೆಗಾಗಿ ಸಲ್ಮಾನ್ ಖಾನ್ ಚಿತ್ರೀಕರಣ ಮಾಡುವಾಗ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗುತ್ತದೆ ಎಂದು ವರದಿಯಾಗಿದೆ.
ಅ. 12ರ ಶನಿವಾರ ಮುಂಬೈನಲ್ಲಿ ಬಾಬಾ ಸಿದ್ದಿಕ್ ಅವರನ್ನು ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಮರುದಿನ ಇಬ್ಬರು ಶೂಟರ್‌ಗಳನ್ನು ಸಹ-ಸಂಚುಗಾರರೊಂದಿಗೆ ಬಂಧಿಸಲಾಗಿತ್ತು.