ಇಂಗ್ಲೀಷ್ ಭಾಷೆ ಬಾರದೇ ಹೋದರೂ ಸಹ ಬಹುತೇಕ ಎಲ್ಲರಿಗೂ ಇಂಗ್ಲೀಷ್ ಭಾಷೆಯಲ್ಲಿರುವ ಲವ್ ಪದದ ಅರ್ಥ ಚೆನ್ನಾಗಿಯೇ ತಿಳಿದಿದೆ. ಮನುಷ್ಯನ ಜೀವನದಲ್ಲಿ ಈ ಪ್ರೀತಿ ಎನ್ನುವುದು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಬಂಧ ಯಾವುದೇ ಇರಲಿ ಅಲ್ಲಿ ಪ್ರೀತಿ ಎನ್ನುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಪ್ರೀತಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಪುಸ್ತಕಗಳು, ಹಾಡುಗಳು, ಸಿನಿಮಾಗಳು ,ಧಾರಾವಾಹಿಗಳು, ವೆಬ್ಸೀರೀಸ್ಗಳು ಹೀಗೆ ನಾನಾ ನಿದರ್ಶನಗಳು ಬಂದುಬಿಟ್ಟಿವೆ. ನಮ್ಮ ಧರ್ಮಗ್ರಂಥಗಳು ಕೂಡ ಪ್ರೀತಿಗೆ ಪ್ರಮುಖ ಸ್ಥಾನವನ್ನೇ ನೀಡಿವೆ.
ಮನಶಾಸ್ತ್ರಜ್ಞರು ಕೂಡ ಪ್ರೀತಿ ಎನ್ನುವುದು ಜೀವನದಲ್ಲಿ ಎಷ್ಟು ಮುಖ್ಯ ಹಾಗೂ ಅದನ್ನು ಅನುಭವಿಸುವುದು ಭಾವನಾತ್ಮಕ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ಹೇಳುತ್ತಾರೆ. ಲವ್ಗಾಗಿ ನಾವು ಪರ್ವತ ಏರಲೂ ಸಿದ್ಧರಿರುತ್ತೇವೆ. ಅಷ್ಟೇ ಏಕೆ ಏಳು ಸಮುದ್ರವನ್ನು ಬೇಕಿದ್ದರೂ ದಾಟುತ್ತೇವೆ. ನಮ್ಮಿಂದ ಸಾಧ್ಯವೇ ಇಲ್ಲ ಎಂಬಂಥಾ ಕಷ್ಟದ ಕೆಲಸವನ್ನೂ ಮಾಡಿಬಿಡುತ್ತೇವೆ, ಅಷ್ಟರ ಮಟ್ಟಿಗೆ ನಮ್ಮನ್ನು ಬದಲಿಸುವ ಸಾಮರ್ಥ್ಯ ಇರುವುದು ಪ್ರೀತಿಯೆಂಬ ಭಾಷೆಗೆ ಮಾತ್ರ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಪ್ರೀತಿ ಎನ್ನುವುದು ಕೇವಲ ಮಾತಿನಲ್ಲಿ ಬಣ್ಣಿಸುವಂತದಲ್ಲ, ಪ್ರೀತಿಯನ್ನು ನಾವು ನಮ್ಮ ನಡವಳಿಕೆಯ ಮೂಲಕ, ಭಾವನೆಗಳ ಮೂಲಕ ಹೊರಹಾಕಬೇಕು. ಇದನ್ನೇ ಪ್ರೀತಿಯ ಭಾಷೆ ಎನ್ನುತ್ತೇವೆ. ಏನನ್ನೂ ಹೇಳದೆಯೇ ಎದುರಿಗಿರುವ ವ್ಯಕ್ತಿಗೆ ಪ್ರೀತಿಯನ್ನು ತಿಳಿಸುವುದನ್ನೇ ನಾವು ಪ್ರೀತಿ ಭಾಷೆ ಎಂದು ಕರೆಯುತ್ತೇವೆ.
ಏನೂ ಹೇಳದೆಯೇ ಎಲ್ಲವನ್ನೂ ತಿಳಿಸುವುದು ಸುಲಭದ ಕೆಲಸವಂತೂ ಖಂಡಿತ ಅಲ್ಲ. ಹಾಗಾದರೆ ಈ ಪ್ರೀತಿಯ ಭಾಷೆಯನ್ನು ಕಲಿಯುವುದು ಹೇಗೆ..? ಎಲ್ಲರೂ ಪ್ರಾಥಮಿಕ ಹಂತದಲ್ಲಿಯೇ ಕಲಿತುಕೊಳ್ಳಬೇಕಾದ ಆ ಪ್ರಮುಖ ಐದು ಪ್ರೀತಿಯ ಭಾಷೆ ಯಾವುದು ಎಂಬುದನ್ನು ತಿಳಿದುಕೊಳ್ಳೋಣ
ಪ್ರೀತಿ ನಾಜೂಕಾಗಿದ್ದಷ್ಟೂ ಚಂದ. ನಮ್ಮ ಮಾತಿಗಿಂತ ನಮ್ಮ ನಡವಳಿಕೆ ಹಾಗೂ ವರ್ತನೆಗಳು ಹೆಚ್ಚು ಮಾತನಾಡುತ್ತವೆ. ನಿಮ್ಮ ಸಂಗಾತಿಯನ್ನು ಪ್ರಶಂಸಿಸುವುದು ಕೂಡ ಪ್ರೇಮದ ಭಾಷೆಯೇ. ಅವಮಾನಗಳು, ಕೊಂಕು ಮಾತುಗಳು ನಿಮ್ಮನ್ನು ಮಾನಸಿಕವಾಗಿ ಛಿದ್ರಗೊಳಿಸಿಬಿಡಬಹುದು ಹಾಗೂ ನಿಮಗೆ ಸುಲಭವಾಗಿ ಅವುಗಳನ್ನು ಮರೆಯಲು ಸಾಧ್ಯವಾಗದೇ ಇರಬಹದು. ಆದರೆ ಪ್ರಶಂಸೆಯ ಮಾತುಗಳು ನಿಮ್ಮ ಮಾನಸಿಕ ಆರೋಗ್ಯಕ್ಕೆ ನಿರಾಳತೆಯನ್ನು ತಂದುಕೊಡುತ್ತದೆ.
ಪ್ರೀತಿ ಎಂದರೆ ಸ್ಪರ್ಶ ಎಂದು ಹೇಳುವವರು ಅನೇಕರಿದ್ದಾರೆ. ಇದು ನಿಜ ಕೂಡ. ಪರಸ್ಪರ ಆಲಂಗಿಸಿಕೊಳ್ಳುವುದು, ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಮಲಗುವುದು, ಹಣೆಗೊಂದು ಪ್ರೀತಿಯ ಮುತ್ತನಿಡುವುದು ಇಂಥಹ ಅನೇಕ ಸ್ಪರ್ಶಗಳು ನಿಮ್ಮ ನಡುವಿನ ಪ್ರೀತಿಯನ್ನು ಇಮ್ಮಡಿಗೊಳಿಸುತ್ತದೆ.
ಒಂದು ಸಣ್ಣ ಸ್ಪರ್ಶ ನಿಮಗೆ ವಿಶೇಷತೆಯ ಭಾವವನ್ನು ಉಂಟು ಮಾಡಬಹುದು. ನೀವು ಬಾಯಿಯಿಂದ ಹೇಳುವುದಕ್ಕಿಂತಲೂ ಹೆಚ್ಚಿನದನ್ನು ಈ ಸ್ಪರ್ಶ ಹೇಳುತ್ತದೆ. ಸಂಗಾತಿಯ ಸಾಂಗತ್ಯವು ನಿಮಗೆ ಭದ್ರತೆಯ ಭಾವವನ್ನು ಉಂಟು ಮಾಡುತ್ತದೆ.